ಗದಗ ನಗರದ ತಹಶೀಲ್ದಾರ್ ಕಚೇರಿ ಆಳುವ ಮಂದಿಯ ದುರ್ವರ್ತನೆಗೆ ಸಾಕ್ಷಿಯಾಗಿದೆ. ನ್ಯಾಯ ಕೇಳಲು ಬಂದ ಯುವಕನೊಬ್ಬನಿಗೆ ಕಾಂಗ್ರೆಸ್ ಮುಖಂಡ, ಉಪ ತಹಶೀಲ್ದಾರ್ ಹಾಗೂ ಅವರ ಸಂಗಡಿಗರು ಕಚೇರಿಯಲ್ಲೇ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ
ಅಕ್ಷಯ್ ಬೊಳ್ಳೊಳ್ಳಿ ಎಂಬ ಯುವಕನ ಗೆಳೆಯನ ಬೈಕ್‌ಗೆ ಉಪ ತಹಶೀಲ್ದಾರ್ ಎಸ್. ಡಿ. ವಾಲ್ಮೀಕಿ ಅವರ ಪರಿಚಯಸ್ಥನ ಕಾರು ಡಿಕ್ಕಿ ಹೊಡೆದಿತ್ತು. ಈ ವಿಚಾರವಾಗಿ ಅಕ್ಷಯ್, ತಹಶೀಲ್ದಾರ್ ಕಚೇರಿಗೆ ತೆರಳಿದ್ದರು. ಕಾರು ಯಾರದು? ಹೆಸರು ತಿಳಿಸಿ ಎಂದು ಕೇಳಿದ ಅಕ್ಷಯ್‌ನ ಪ್ರಶ್ನೆಗೆ ಉಪ ತಹಶೀಲ್ದಾರ್ ಎಸ್. ಡಿ. ವಾಲ್ಮೀಕಿ ಕೆರಳಿದ್ರು. ಅವರು ಹಾಗೂ ಅವರ ತಂಡ, ಅಕ್ಷಯ್ ಮೇಲೆ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ.
ಉಪತಹಶೀಲ್ದಾರ್ ವಾಲ್ಮೀಕಿ ಜೊತೆ ಕಾಂಗ್ರೆಸ್ ಮುಖಂಡ ವಿದ್ಯಾಧರ್ ದೊಡ್ಡಮನಿ ಹಾಗೂ ಮತ್ತೊಬ್ಬರು ಹಲ್ಲೆ ಮಾಡಿದ್ದಾರೆ. ಆದ್ರೆ, ಘಟನೆ ಸಂಬಂಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸಾರ್ವಜನಿಕ ಮತ್ತು ನಾಗರಿಕ ಹಕ್ಕು ಹೋರಾಟಗಾರರು ಪೊಲೀಸರು ಹಾಗೂ ಜಿಲ್ಲಾಡಳಿತದ ನಿಷ್ಕ್ರಿಯತೆಗೆ ಖಂಡನೆ ವ್ಯಕ್ತ ಪಡಿಸಿದ್ದಾರೆ. ಉಪ ತಹಶೀಲ್ದಾರ್ ಹಾಗೂ ಸಂಬಂಧಪಟ್ಟವರಿಗೆ ತಕ್ಷಣವೇ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಆಕ್ರೋಶದ ಬಿಸಿ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಯೊಬ್ಬರಯ ರಾಜಿ ಸಂಧಾನಕ್ಕೆ ಯತ್ನ ಮಾಡಿದ್ದಾರೆ ಎನ್ನಲಾಗಿದೆ.