Top Newsರಾಜಕೀಯರಾಜ್ಯಸುದ್ದಿ

ಜಿಟಿಡಿ ವಿರುದ್ಧ ಹೆಚ್‌ಡಿಕೆ ಕೆಂಡಾಮಂಡಲ;ನಿಷ್ಠೆ ಇಲ್ಲದವರು ನಮಗೆ ಬೇಡವೇ ಬೇಡ

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಜಿ.ಟಿ. ದೇವೇಗೌಡರು ಈಗ ನಮ್ಮ ಜೊತೆಯಲ್ಲಿಲ್ಲ, ಅವರು ಬೇರೆ ಮಹಾನ್ ನಾಯಕರ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿರುವ ಕುಮಾರಸ್ವಾಮಿ, ಪಕ್ಷದ ಬಗ್ಗೆ ನಿಯತ್ತು ಮತ್ತು ನಿಷ್ಠೆ ಇಲ್ಲದವರನ್ನು ಜೊತೆಯಲ್ಲಿಟ್ಟುಕೊಳ್ಳುವ ಅವಶ್ಯಕತೆಯಿಲ್ಲ ಎಂದು ಗುಡುಗಿದ್ದಾರೆ. ತಮ್ಮ ಮುಂದೆ ಜಿಟಿಡಿ ಹೆಸರನ್ನು ಪ್ರಸ್ತಾಪಿಸಬೇಡಿ ಎಂದು ಮಾಧ್ಯಮಗಳಿಗೆ ತಿಳಿಸಿದ ಅವರು, ಈ ಬೆಳವಣಿಗೆಗಳಿಂದ ತಮ್ಮ ಮನಸ್ಸಿಗೆ ಭಾರಿ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಈ ಹಿಂದೆ ತಾವು ರಾಜೀನಾಮೆ ನೀಡುವಂತ ಪರಿಸ್ಥಿತಿ ಬಂದಾಗ ತಾವು ಮಾಡಿದ ತಪ್ಪಾದರೂ ಏನು , ಬಹಳಷ್ಟು ಜನರನ್ನು ಬೆಳೆಸಿದ್ದೇವೆ, ಮೆರೆಸಿದ್ದೇವೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ, ಆದರೆ ಅವರು ಯಾವಾಗ ಯಾರನ್ನು ಮೆರೆಸುತ್ತಾರೋ ಯಾರಿಗೂ ಗೊತ್ತಿಲ್ಲ ಟೀಕಿಸಿದ್ದಾರೆ. ಈಗ ಯಾರೋ ಒಬ್ಬರನ್ನು ಮೆರೆಸಲು ಜಿ.ಟಿ. ದೇವೇಗೌಡರು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿರುವ ಅವರು, ಅವರಿಗೆ ಕನಿಷ್ಠ ನಿಯತ್ತು ಇದೆಯೇ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರಕ್ಕೂ ತಮಗೂ ಅವಿನಾಭಾವ ಮತ್ತು ಭಾವನಾತ್ಮಕ ಸಂಬಂಧವಿದೆ ಎಂದು ಸ್ಮರಿಸಿದ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಮತದಾರರು ಕೈಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶವಿದೆ ಮತ್ತು ಜಿಟಿಡಿ ಅವರ ಅನುಪಸ್ಥಿತಿ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

Comments (0)

Your email address will not be published. Required fields are marked *

Back to top button