ತುಮಕೂರು : ಕಲ್ಪತರು ನಾಡು ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಸುತ್ತಿದ್ದ ಧರಣಿಯನ್ನು ಕೈಬಿಡಲಾಗಿದೆ.
ಕಳೆದ 40 ದಿನಗಳಿಂದ ತೆಂಗು ಬೆಳೆಗಾರರ ಕೊಬ್ಬರಿಗೆ 15 ಸಾವಿರ ಬೆಂಬಲ ಬೆಲೆ ನಿಗಧಿ ಪಡಿಸುವಂತೆ ನಡೆಸಲಾಗುತ್ತಿದ್ದ ಅಹೋರಾತ್ರಿ ಧರಣಿಯನ್ನು ಕೊಬ್ಬರಿ ಬೆಳೆಗಾರರು ಕೈ ಬಿಟ್ಟಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿಬಳಿ ಸುದೀರ್ಘವಾಗಿ ಧರಣಿ ಸತ್ಯಾಗ್ರಹವನ್ನು ನಡೆಸಲಾಗಿದ್ದು, ಇದರ ಜೊತೆಯಲ್ಲಿ ಉಪವಾಸ ಸತ್ಯಾಗ್ರಹ, ಪಂಜಿನ ಮೇರವಣಿಗೆ, ಟ್ರಾಕ್ಟರ್ ರ್ಯಾಲಿ ಮತ್ತು ತುಮಕೂರು ನಗರ ಬಂದ್ ನಡೆಸಲಾಗಿತ್ತು.
ಇದೀಗ ಕೇಂದ್ರ ಸರ್ಕಾರ ಕೊಬ್ಬರಿಗೆ ಎಂ.ಎಸ್.ಪಿ ಬೆಲೆ 12,000 ಮತ್ತು ರಾಜ್ಯ ಸರ್ಕಾರ ಕೇವಲ 1,500/- ಗಳ ಪ್ರೋತ್ಸಾಹ ಧನ ನೀಡಿದ್ದು, ಚುನಾವಣಾ ಪೂರ್ವದಲ್ಲಿ ಕೊಬ್ಬರಿಗೆ 15,000/- ರೂ ನೀಡುವುದಾಗಿ ಹೇಳಿರುವ ಮಾತು ಹುಸಿಯಾಗಿದೇ. ಸದ್ಯ 4೦ ದಿನಗಳ ಅಹೋರಾತ್ರಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿ ರೈತರ ಉಳಿವಿಗಾಗಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ನೀರಾ ಚಳುವಳಿ ಪ್ರಾರಂಭಿಸಲು ತೆಂಗು ಬೆಳೆಯುವ ರೈತರಿಗೆ ಕರೆ ನೀಡಿ ಚಳುವಳಿ ಪ್ರಾರಂಭಿಸಲಾಗುವುದು ಎಂದು ರೈತ ಸಂಘ ಎಚ್ಚರಿಕೆ ನೀಡಿದೆ.