ಕರ್ನಾಟಕದ ರಾಜಕೀಯ ವಲಯದಲ್ಲಿ ಅಬಕಾರಿ ಇಲಾಖೆಯ ಹಗರಣ ಈಗ ದೊಡ್ಡ ಸಂಚಲನ ಮೂಡಿಸಿದೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಸುಮಾರು ಆರು ಸಾವಿರ ಕೋಟಿ ರೂಪಾಯಿಗಳ ಬೃಹತ್ ಹಗರಣ ನಡೆದಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಈ ಹಣವನ್ನು ಅಸ್ಸಾಂ, ತಮಿಳುನಾಡು ಮತ್ತು ಕೇರಳದ ಚುನಾವಣೆಗಳಿಗಾಗಿ ಬಳಸಲಾಗುತ್ತಿದೆ ಎಂಬ ಗಂಭೀರ ದೂರನ್ನು ನೀಡಿದ್ದಾರೆ. ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಪಟ್ಟು ಹಿಡಿದಿದ್ದಾರೆ.
ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಜಮಾಯಿಸಿದ ಶಾಸಕರು ತಮಟೆ ಬಾರಿಸಿ ಮತ್ತು ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು. “ಕೋಟಿ ಕೋಟಿ ಲೂಟಿ, ರಾಜೀನಾಮೆ ಕೊಡಲೇಬೇಕು” ಎಂಬ ಹಾಡುಗಳನ್ನು ಹಾಡುತ್ತಾ, “ಗೋವಿಂದ ಗೋವಿಂದ” ಎಂಬ ಘೋಷಣೆಗಳ ಮೂಲಕ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು. ರಾತ್ರಿಯಿಡೀ ವಿಧಾನಸೌಧದ ಕಾರಿಡಾರ್‌ನಲ್ಲಿ ಹಾಸಿಗೆಗಳನ್ನು ಹಾಸಿ ಮಲಗಿದ್ದ ಸದಸ್ಯರು, ಇಂದು ಮುಂಜಾನೆ ನಾಲ್ಕು ಗಂಟೆಗೆ ಎದ್ದು ಟೀ ಕುಡಿದು ಒಳಾಂಗಣದಲ್ಲೇ ವಾಕಿಂಗ್ ಮಾಡುವ ಮೂಲಕ ತಮ್ಮ ಹೋರಾಟದ ಚೈತನ್ಯವನ್ನು ಪ್ರದರ್ಶಿಸಿದರು.
ಬಿಜೆಪಿ ಶಾಸಕ ಭರತ್ ಶೆಟ್ಟಿ ಮಾತನಾಡಿ, ಈ ಹಿಂದೆ ವಾಲ್ಮೀಕಿ ಹಗರಣದ ಹಣ ತೆಲಂಗಾಣ ಚುನಾವಣೆಗೆ ಬಳಕೆಯಾದಂತೆ, ಈಗ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಹಣ ತಮಿಳುನಾಡು ಚುನಾವಣೆಗೆ ಹರಿಯುತ್ತಿದೆ ಎಂದು ಆರೋಪಿಸಿದರು. ಮತ್ತೊಂದೆಡೆ ಜೆಡಿಎಸ್ ಶಾಸಕ ಸುರೇಶ್ ಬಾಬು ಮಾತನಾಡಿ, ದಾಖಲೆ ಸಮೇತ ವಿಷಯಗಳನ್ನು ಮುಂದಿಟ್ಟರೂ ಸರ್ಕಾರ ಸ್ಪಂದಿಸುತ್ತಿಲ್ಲ . ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಇದ್ದಂತಿಲ್ಲ, ಅವರು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದು ಟೀಕಿಸಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಸದನದಲ್ಲಿ ಇದ್ದಿದ್ದರೆ ಹೋರಾಟಕ್ಕೆ ಮತ್ತಷ್ಟು ಬಲ ಸಿಗುತ್ತಿತ್ತು ಎಂದು ಅಭಿಪ್ರಾಯಪತ್ತಿದ್ದಾರೆ.


