ಮದ್ಯಪ್ರಿಯರ ಜೇಬಿಗೆ ಕತ್ತರಿ;ಆಲ್ಕೋಹಾಲ್ ಅಂಶದ ಮೇಲೆ ಹೊಸ ಟ್ಯಾಕ್ಸ್!

ಮುಖ್ಯಮಂತ್ರಿ ಸಿದ್ದರಾಮಯ್ಯ) ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸಲು ‘ವೈಜ್ಞಾನಿಕ’ ತಂತ್ರವೊಂದನ್ನು ರೂಪಿಸಿದ್ದಾರೆ. ಇನ್ನು ಮುಂದೆ ಮದ್ಯದ ಮೇಲಿನ ತೆರಿಗೆಯನ್ನು ಕೇವಲ ಬಾಟಲಿ ಬೆಲೆಯ ಮೇಲೆ ವಿಧಿಸುವ ಬದಲಿಗೆ, ಅದರಲ್ಲಿರುವ ಆಲ್ಕೋಹಾಲ್ ಅಥವಾ ಮದ್ಯದ ಅಂಶವನ್ನು ಆಧರಿಸಿ ನಿರ್ಧರಿಸಲು ಸರ್ಕಾರ ತೀರ್ಮಾನಿಸಿದೆ. ಈ ಹೊಸ ನೀತಿಯಿಂದಾಗಿ ಮದ್ಯದ ದರದಲ್ಲಿ ಹಂತ ಹಂತವಾಗಿ ಏರಿಕೆಯಾಗುವುದು ಖಚಿತವಾಗಿದೆ.
ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳಿಗೆ ಬೇಕಾದ ಬೃಹತ್ ಮೊತ್ತವನ್ನು ಕ್ರೋಢೀಕರಿಸಲು ಅಬಕಾರಿ ಇಲಾಖೆಯೇ ಸರ್ಕಾರಕ್ಕೆ ಪ್ರಮುಖ ಆಸರೆಯಾಗಿದೆ. ಕಳೆದ ವರ್ಷ ಫೆಬ್ರವರಿ ಅಂತ್ಯದವರೆಗೆ ಅಬಕಾರಿ ಇಲಾಖೆಯು 36,492 ಕೋಟಿ ರೂಪಾಯಿ ರಾಜಸ್ವ ಸಂಗ್ರಹಿಸಿತ್ತು. ಆದರೆ, ಈ ಬಾರಿ ಈ ಗುರಿಯನ್ನು ಗಣನೀಯವಾಗಿ ಏರಿಸಲಾಗಿದ್ದು, 2026-27ನೇ ಸಾಲಿನಲ್ಲಿ ಬರೋಬ್ಬರಿ 45,000 ಕೋಟಿ ರೂಪಾಯಿ ಸಂಗ್ರಹಿಸುವ ಬೃಹತ್ ಗುರಿಯನ್ನು ಸಿಎಂ ಘೋಷಿಸಿದ್ದಾರೆ.
ರಾಜ್ಯಾದ್ಯಂತ ಏಕರೂಪದ ಅಬಕಾರಿ ಸುಂಕವನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಎಕ್ಸ್-ಫ್ಯಾಕ್ಟರಿ ದರಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ತೆರಿಗೆಯನ್ನು ಲೆಕ್ಕ ಹಾಕಲಾಗುತ್ತದೆ. ಮದ್ಯದ ಬೆಲೆಯನ್ನು ಒಂದೇ ಬಾರಿಗೆ ಏರಿಸಿ ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲು, ಬೆಲೆ ಏರಿಕೆಯನ್ನು ಹಂತ ಹಂತವಾಗಿ ಜಾರಿಗೆ ತರಲು ಯೋಜಿಸಲಾಗಿದೆ. ಈ ಮೂಲಕ ಸರ್ಕಾರದ ಖಜಾನೆಗೆ ಶಕ್ತಿ ತುಂಬುವ ಜೊತೆಗೆ ತೆರಿಗೆ ಪದ್ಧತಿಯಲ್ಲಿ ಪಾರದರ್ಶಕತೆ ತರಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ.




