bengaluruರಾಜ್ಯಸುದ್ದಿಹಣಕಾಸು

ಎಲ್ಲವೂ ನಕಲಿ.. ಲೂಟಿ ಮಾತ್ರ ಅಸಲಿ…!

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಮಹಾರಾಣಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಈಗ ‘ಮಹಾ’ ಲೂಟಿ ಪರ್ವವೊಂದು ಬಯಲಾಗಿದ್ದು, ಇದು ಶಿಕ್ಷಣ ಕಾಶಿಯೋ ಅಥವಾ ಲೂಟಿಕೋರರ ಅಡ್ಡೆಯೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತಿಥಿ ಉಪನ್ಯಾಸ ಮತ್ತು ತಜ್ಞರ ಕಾರ್ಯಕ್ರಮಗಳ ಹೆಸರಿನಲ್ಲಿ ಹೈಟೆಕ್ ದರೋಡೆ ನಡೆದಿದ್ದು, ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ಅಕ್ರಮವಾಗಿ ಲೂಟಿ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ವಿಶೇಷವೆಂದರೆ, ವಿದೇಶದಲ್ಲಿ ನೆಲೆಸಿರುವ ಉಪನ್ಯಾಸಕರು ಇಲ್ಲಿ ಬಂದು ಪಾಠ ಮಾಡಿದ್ದಾರೆ ಎಂಬ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರಿಗೆ ತಲಾ 48 ಸಾವಿರ ರೂಪಾಯಿಗಳಂತೆ ಸಂಭಾವನೆ ಪಾವತಿಸಲಾಗಿದೆ. ಕಾರ್ಯಕ್ರಮಗಳೇ ನಡೆಯದಿದ್ದರೂ ಕೇವಲ ಕಾಗದದ ಮೇಲೆ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರದ ಖಜಾನೆಗೆ ಕನ್ನ ಹಾಕಲಾಗಿದೆ.

ಈ ವ್ಯವಸ್ಥಿತ ಸ್ಕ್ಯಾಮ್‌ನಲ್ಲಿ ನಕಲಿ ಬಿಲ್, ನಕಲಿ ಸಹಿ ಮತ್ತು ನಕಲಿ ಜಿಎಸ್‌ಟಿ (GST) ಸಂಖ್ಯೆಗಳನ್ನು ಬಳಸಿಕೊಳ್ಳಲಾಗಿದ್ದು, ಸುಮಾರು 1.83 ಲಕ್ಷ ಮೊತ್ತದ ಬಿಲ್‌ಗಳನ್ನು ಕೇವಲ ದಾಖಲೆಗಳಲ್ಲಿ ತೋರಿಸಿ ಹಣ ಪಡೆಯಲಾಗಿದೆ. ಈ ಅಕ್ರಮದ ಒಟ್ಟು ಮೊತ್ತ ಸುಮಾರು 2 ಕೋಟಿ ರೂಪಾಯಿಗಳಿಗೂ ಅಧಿಕವಿರಬಹುದು ಎಂದು ಅಂದಾಜಿಸಲಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ವಿಶ್ವವಿದ್ಯಾಲಯವು ಭ್ರಷ್ಟ ಅಧಿಕಾರಿಗಳ ಪಾಲಿನ ಮಾಫಿಯಾ ಅಡ್ಡೆಯಾಗಿ ಮಾರ್ಪಟ್ಟಿರುವುದು ದುರದೃಷ್ಟಕರವಾಗಿದೆ. ಜನರ ತೆರಿಗೆ ಹಣವನ್ನು ಇಷ್ಟು ತಾತ್ಸಾರವಾಗಿ ಲೂಟಿ ಹೊಡೆದಿರುವ ‘ಅದೃಶ್ಯ’ ಹಸ್ತಗಳು ಯಾರವು ಎಂಬ ಪ್ರಶ್ನೆ ಈಗ ಎದ್ದಿದೆ. ಅಕ್ಷರ ಕಲಿಸಬೇಕಾದ ಗುರುಗಳೇ ಇಂತಹ ಅಕ್ರಮಕ್ಕೆ ಸಾಥ್ ನೀಡಿರುವುದು ಶಿಕ್ಷಣ ಕ್ಷೇತ್ರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ.

ಈ ಭ್ರಷ್ಟಾಚಾರದ ಕುರಿತು ಎಬಿವಿಪಿ (ABVP) ಮುಖಂಡರು ಈಗಾಗಲೇ ಲೋಕಾಯುಕ್ತಕ್ಕೆ ಪಕ್ಕಾ ಪುರಾವೆಗಳೊಂದಿಗೆ ದೂರು ನೀಡಿದ್ದಾರೆ. ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಶುರುವಾಗಿದ್ದರೂ, ಸರ್ಕಾರ ಮಾತ್ರ ಈ ಬಗ್ಗೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಷ್ಟೆಲ್ಲಾ ದಾಖಲೆಗಳಿದ್ದರೂ ಅಧಿಕಾರಿಗಳನ್ನು ಇನ್ನೂ ಏಕೆ ಅಮಾನತು ಮಾಡಿಲ್ಲ ಮತ್ತು ಲೂಟಿ ಮಾಡಿದ ಹಣವನ್ನು ವಸೂಲಿ ಮಾಡಲು ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಸತ್ಯ ಬಯಲಾಗುವವರೆಗೆ ಮತ್ತು ಈ ‘ಕಳ್ಳ’ ಅಧಿಕಾರಿಗಳನ್ನು ಜೈಲಿಗಟ್ಟುವವರೆಗೆ ‘ಫ್ರೀಡಂ ಟಿವಿ’ ಈ ಹೋರಾಟವನ್ನು ಮುಂದುವರಿಸಲಿದ್ದು, ಅಕ್ರಮದ ಅಸಲಿ ಮುಖವಾಡ ಕಳಚುವುದು ಖಚಿತವಾಗಿದೆ. ಲೂಟಿಕೋರರ ಹೆಡೆಮುರಿ ಕಟ್ಟುವ ಕಾಲ ಹತ್ತಿರ ಬಂದಿದ್ದು, ಶಿಕ್ಷಣ ವ್ಯವಸ್ಥೆಯನ್ನು ಉಳಿಸಲು ಕಠಿಣ ಕ್ರಮದ ಅಗತ್ಯವಿದೆ.

Comments (0)

Your email address will not be published. Required fields are marked *

Back to top button