
ರಾಜ್ಯದ ಜನತೆಗೆ ಬೆಲೆ ಏರಿಕೆಯ ಮತ್ತೊಂದು ಬಿಸಿ ತಟ್ಟುವ ಕಾಲ ಹತ್ತಿರವಾಗುತ್ತಿದೆ. ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ನಷ್ಟವನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಪ್ರಸ್ತುತ ರಾಜ್ಯದ ಎಲ್ಲಾ ಎಸ್ಕಾಂಗಳು ಒಟ್ಟಾರೆಯಾಗಿ ಸುಮಾರು 4,500 ಕೋಟಿ ರೂಪಾಯಿಗಳ ಬೃಹತ್ ನಷ್ಟದಲ್ಲಿದ್ದು, ಈ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಸಿದ್ಧತೆ ನಡೆಸಿವೆ.ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಾದ ಬೆಸ್ಕಾಂ ಒಂದೇ 2024-25ನೇ ಸಾಲಿನಲ್ಲಿ 2,800 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ.
ಈ ಆರ್ಥಿಕ ಸಂಕಷ್ಟದಿಂದ ಹೊರಬರಲು ಹೆಚ್ಚುವರಿ ದರ ಏರಿಕೆಯೇ ಮಾರ್ಗ ಎಂದು ಕಂಪನಿಗಳು ಪಟ್ಟು ಹಿಡಿದಿವೆ. ಈಗಾಗಲೇ ಮುಂದಿನ ಕೆಲವು ವರ್ಷಗಳ ದರ ನಿಗದಿಯಾಗಿದ್ದರೂ, ಪ್ರಸ್ತುತ ಉಂಟಾಗಿರುವ ಅನಿರೀಕ್ಷಿತ ನಷ್ಟವನ್ನು ಸರಿದೂಗಿಸಲು ವಿಶೇಷ ದರ ಪರಿಷ್ಕರಣೆಗೆ ಆಯೋಗವು ಚಿಂತನೆ ನಡೆಸುತ್ತಿದೆ. ಫೆಬ್ರವರಿ 16 ರಿಂದ 27ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ವಿಚಾರಣಾ ಸಭೆಗಳು ನಡೆಯಲಿದ್ದು, ಗ್ರಾಹಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ. ಈ ಎಲ್ಲಾ ಪ್ರಕ್ರಿಯೆಗಳ ನಂತರ ಏಪ್ರಿಲ್ 1 ರಿಂದ ಪರಿಷ್ಕೃತ ದರಗಳು ಜಾರಿಗೆ ಬರುವ ಸಾಧ್ಯತೆಯಿದ್ದು, ಇದು ಸಾಮಾನ್ಯ ಜನಜೀವನದ ಮೇಲೆ ನೇರ ಪರಿಣಾಮ ಬೀರಲಿದೆ.




