ರಾಜಕೀಯರಾಜ್ಯಸುದ್ದಿ

ಡಿಕೆಶಿ ಮಾಸ್ಟರ್ ಪ್ಲ್ಯಾನ್; ಜಿಲ್ಲಾ ಕಾರ್ಯಾಧ್ಯಕ್ಷರ ನೇಮಕದ ಹಿಂದೆ 2028ರ ಚುನಾವಣಾ ಸ್ಕೆಚ್!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಲವು ಕಾಂಗ್ರೆಸ್ ಜಿಲ್ಲಾ ಘಟಕಗಳಿಗೆ ಕಾರ್ಯಾಧ್ಯಕ್ಷರನ್ನು ನೇಮಿಸಿರುವುದು ಈಗ ಪಕ್ಷದೊಳಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರದಿಂದ ಜಿಲ್ಲಾ ಕಾಂಗ್ರೆಸ್ ಸಮಿತಿಗಳಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ತಮಗೆ ಬೇಕಾದ ಕಡೆಗಳಲ್ಲಿ ಮಾತ್ರ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸಿಎಂ ಕುರ್ಚಿ ಕದನ ಮತ್ತು ಸಚಿವ ಸಂಪುಟ ವಿಸ್ತರಣೆಯ ಗೊಂದಲಗಳ ನಡುವೆಯೇ ಡಿಕೆಶಿ ಅವರ ಈ ಹೊಸ ಪದ್ಧತಿಯು ಪಕ್ಷದ ಆಂತರಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಡಿಸಿಸಿ ಅಧ್ಯಕ್ಷರಿಗೆ ಸಮಾನಾಂತರವಾಗಿ ಹೊಸ ಕಾರ್ಯಾಧ್ಯಕ್ಷರ ಹುದ್ದೆಯನ್ನು ಸೃಷ್ಟಿಸಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಹಲವು ಘಟಕಗಳು ಕಿಡಿಕಾರಿವೆ. ಈ ನೇಮಕಾತಿಯ ಹಿಂದೆ ಡಿ.ಕೆ. ಶಿವಕುಮಾರ್ ಜಿಲ್ಲಾ ಮಟ್ಟದಲ್ಲಿ ಪರ್ಯಾಯ ನಾಯಕರನ್ನು ಹುಟ್ಟುಹಾಕುತ್ತಿದ್ದಾರೆ ಎಂಬ ಗುಮಾನಿ ವ್ಯಕ್ತವಾಗಿದೆ. ಇದು ಕೇವಲ ಸಾಧಾರಣ ನೇಮಕಾತಿಯಲ್ಲ, ಬದಲಿಗೆ 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗಿರುವ ‘ಮೆಗಾ ಪ್ಲ್ಯಾನ್’ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಕಾರ್ಯಾಧ್ಯಕ್ಷರಿಗೆ ನೀಡಿರುವ ಟಾಸ್ಕ್ ಕೂಡ ಅಷ್ಟೇ ಗಂಭೀರವಾಗಿದೆ. ಹಾಲಿ ಶಾಸಕರ ಕಾರ್ಯವೈಖರಿ, ಜನರೊಂದಿಗಿನ ಸಂಪರ್ಕ ಮತ್ತು 2028ರ ಚುನಾವಣೆಯಲ್ಲಿ ಅವರ ಸೋಲು-ಗೆಲುವಿನ ಸಾಧ್ಯತೆಗಳ ಬಗ್ಗೆ ಪರೋಕ್ಷವಾಗಿ ಸರ್ವೆ ನಡೆಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸ್ಥಿತಿಗತಿ ಹಾಗೂ ಕ್ಷೇತ್ರ ಬದಲಾವಣೆಯ ಸಾಧಕ-ಬಾಧಕಗಳ ಬಗ್ಗೆ ವರದಿ ಪಡೆಯುವ ಮೂಲಕ, ಅಭ್ಯರ್ಥಿಗಳ ಆಯ್ಕೆಗೆ ಈಗಿನಿಂದಲೇ ಸಿದ್ಧತೆ ನಡೆಸಲಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಡಿಸಿಸಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.

Comments (0)

Your email address will not be published. Required fields are marked *

Back to top button