Tamil naduರಾಜಕೀಯಸುದ್ದಿ

ಚುನಾವಣೆ ಹೊತ್ತಲ್ಲಿ ವಿಚ್ಛೇದನ ವದಂತಿ: ವಿರೋಧಿಗಳ ವಿರುದ್ಧ ಗುಡುಗಿದ ದಳಪತಿ ವಿಜಯ್‌

ತಮಿಳುನಾಡು: ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ದಿನೇ ದಿನೇ ಏರುತ್ತಿರುವ ಬೆನ್ನಲ್ಲೇ, ಖ್ಯಾತ ನಟ ಮತ್ತು ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರು ತಮ್ಮ ವೈಯಕ್ತಿಕ ಜೀವನವನ್ನು ರಾಜಕೀಯಕ್ಕೆ ಎಳೆದು ತರುತ್ತಿರುವ ವಿರೋಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು (ಏಪ್ರಿಲ್ 8) ತಿರುನಲ್ವೇಲಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ತಮ್ಮ ವಿಚ್ಛೇದನದ ವದಂತಿಗಳನ್ನು ಚುನಾವಣಾ ಸಮಯದಲ್ಲಿ ಮುನ್ನೆಲೆಗೆ ತಂದಿರುವುದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಗುಡುಗಿದ್ದಾರೆ. ಚುನಾವಣೆಗೆ ಇನ್ನು ಕೇವಲ 30 ದಿನಗಳು ಬಾಕಿ ಇರುವಾಗ ಇಂತಹ ವದಂತಿಗಳನ್ನು ಹಬ್ಬಿಸುವ ಮೂಲಕ ತಮ್ಮ ತೇಜೋವಧೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ನೇರವಾಗಿ ಕಿಡಿಕಾರಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ವಿಜಯ್ ಹೆಸರು ಕೇಳಿಬಂದಿತ್ತು. ಈ ಕುರಿತು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮೌನ ಮುರಿದಿರುವ ವಿಜಯ್, “ನನ್ನ ಆಪ್ತರು ಮತ್ತು ವೈಯಕ್ತಿಕ ಜೀವನದ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಹಬ್ಬಿಸುವ ಮೂಲಕ ನನ್ನನ್ನು ಜನರಿಂದ ದೂರ ಮಾಡಲು ಸಾಧ್ಯವಿಲ್ಲ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ವಿರೋಧಿಗಳ ಈ ಪಿತೂರಿಗಳು ತಮ್ಮ ರಾಜಕೀಯ ಹಾದಿಯನ್ನು ತಡೆಯಲು ಮಾಡುತ್ತಿರುವ ವ್ಯರ್ಥ ಪ್ರಯತ್ನಗಳೆಂದು ಅವರು ಬಣ್ಣಿಸಿದ್ದಾರೆ.

ವೈಯಕ್ತಿಕ ವಿಚಾರಗಳಷ್ಟೇ ಅಲ್ಲದೆ, ತಮ್ಮ ಕೊನೆಯ ಸಿನಿಮಾ ‘ಜನ ನಾಯಕನ್’ ಬಿಡುಗಡೆಗೆ ಎದುರಾಗಿರುವ ಸೆನ್ಸಾರ್ ಮಂಡಳಿಯ ಅಡೆತಡೆಗಳ ಹಿಂದೆಯೂ ರಾಜಕೀಯ ಹಸ್ತಕ್ಷೇಪವಿದೆ ಎಂದು ವಿಜಯ್ ಆರೋಪಿಸಿದ್ದಾರೆ. ಕರೂರ್ ಘಟನೆಯಿಂದ ಹಿಡಿದು ಸಿನಿಮಾದ ಬಿಡುಗಡೆ ತಡೆಯುವವರೆಗೆ ಎಲ್ಲವೂ ಯೋಜಿತ ಸಂಚಿನ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ. ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿರುವ ವಿಜಯ್ ಅವರ ಈ ‘ಗರಂ’ ಭಾಷಣವು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಅವರ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದೆ. ಎಷ್ಟೇ ಅಡೆತಡೆಗಳು ಬಂದರೂ ಜನರ ಬೆಂಬಲ ತಮ್ಮೊಂದಿಗಿದೆ ಎಂಬ ವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button