Tuesday, February 24, 2026
29.9 C
Bengaluru
Google search engine
LIVE
ಮನೆಸಿನಿಮಾದೇವಸಸ್ಯ; ಐದು ಭಾಷೆಗಳಲ್ಲಿ ಬರಲಿದೆ ಮಣ್ಣಿನ ಸೊಗಡಿನ ಕಥೆ!

ದೇವಸಸ್ಯ; ಐದು ಭಾಷೆಗಳಲ್ಲಿ ಬರಲಿದೆ ಮಣ್ಣಿನ ಸೊಗಡಿನ ಕಥೆ!

ಉತ್ತರ ಕನ್ನಡ: ಸಿರ್ಸಿ ಸುತ್ತಮುತ್ತಲ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಜನಾಂಗದ ವಿಶಿಷ್ಟ ಸಂಸ್ಕೃತಿ ಮತ್ತು ಆಚರಣೆಗಳನ್ನು ಬೆಳ್ಳಿಪರದೆಯ ಮೇಲೆ ಅನಾವರಣಗೊಳಿಸಲು ‘ದೇವಸಸ್ಯ’ ಚಿತ್ರ ಸಜ್ಜಾಗಿದೆ.

ಸಿರ್ಸಿ ತಾಲ್ಲೂಕಿನ ಮಣ್ಣಿನ ಸೊಗಡು ಹಾಗೂ ಅಲ್ಲಿನ ಜನರ ಜೀವನಶೈಲಿಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಕಾರ್ತೀಕ್ ಭಟ್ ಈ ಕಥಾಹಂದರವನ್ನು ಸಿದ್ಧಪಡಿಸಿದ್ದಾರೆ. ಒಂದು ಅಪರೂಪದ ಗಿಡದ ಸುತ್ತ ಇಡೀ ಚಿತ್ರಕಥೆ ಸಾಗಲಿದ್ದು, ಇದು ಕೇವಲ ಒಂದು ಸಿನಿಮಾ ಮಾತ್ರವಲ್ಲದೆ ಒಂದು ಹೊಸ ಜಗತ್ತನ್ನೇ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನವಾಗಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಈ ಚಿತ್ರದ ಅಂತಿಮ ಹಂತದ ಚಿತ್ರೀಕರಣವು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪುಟ್ಟಣ್ಣ ಕಣಗಾಲ್ ಸ್ಟುಡಿಯೋದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಅನಂತ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅನಂತಮೂರ್ತಿ ಎಂ. ಹೆಗಡೆ ಅತ್ಯಂತ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕರು, ಸಂಜೀವಿನಿ ಗಿಡದಷ್ಟೇ ವಿಶೇಷವಾದ ‘ದೇವಸಸ್ಯ’ ಎಂಬ ಹೆಸರಿನ ಸಸ್ಯವೊಂದರ ಕುರಿತಾದ ಕಥೆಯಾದ್ದರಿಂದ ಇದನ್ನು ಕನ್ನಡ, ತೆಲುಗು ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಚಿತ್ರಕ್ಕಾಗಿ ಸುಮಾರು 30 ವರ್ಷಗಳ ಹಿಂದಿನ ಹಳ್ಳಿಯ ವಾತಾವರಣವನ್ನು ಮರುಸೃಷ್ಟಿಸಲು ಬೃಹತ್ ಸೆಟ್ ಹಾಕಲಾಗಿತ್ತು ಮತ್ತು 93 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶಕ ಕಾರ್ತೀಕ್ ಭಟ್ ಈ ಸ್ಕ್ರಿಪ್ಟ್‌ಗಾಗಿ ಮೂರು ವರ್ಷಗಳ ಕಾಲ ಹಗಲಿರುಳು ಶ್ರಮಿಸಿದ್ದು, ಉತ್ತರ ಕನ್ನಡದ ಮಲೆನಾಡು ಮತ್ತು ಬಯಲುಸೀಮೆಯ ಸೊಬಗನ್ನು ಚಿತ್ರದಲ್ಲಿ ಸೆರೆಹಿಡಿದಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಸಿದ್ದಿ ಸಮುದಾಯದ ನೈಜ ಪ್ರತಿಭೆಗಳನ್ನು ಬಳಸಿಕೊಳ್ಳಲಾಗಿದೆ. ಸಿರ್ಸಿಯಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿದ್ದ ಸೆಲ್ವಿನ್ ದೇಸಾಯಿ ಎಂಬ ಯುವಕನನ್ನು ಈ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಆಯ್ಕೆ ಮಾಡಲಾಗಿದ್ದು, ನಿರ್ದೇಶಕರು ಆತನಿಗೆ ಎರಡು ವರ್ಷಗಳ ಕಾಲ ನಟನೆಯ ತರಬೇತಿ ನೀಡಿದ್ದಾರೆ. ನಾಯಕ ಸೆಲ್ವಿನ್ ದೇಸಾಯಿ ಅವರ ಜೊತೆಗೆ ರಂಗಪ್ರತಿಭೆ ಆಹಾನ್ ಗೌಡ ‘ಕುರ್ಮುಷ್ಠ’ ಎಂಬ ಪಾತ್ರದಲ್ಲಿ ಮತ್ತು ನಾಯಕಿ ಬಿಂಬಿಕಾ ಜೆ. ರಾವ್ ‘ಮಾತಂಗಿ’ ಎಂಬ ಸಿದ್ದಿ ಹುಡುಗಿಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ, ಈ ಸಿನಿಮಾದಲ್ಲಿ 150ಕ್ಕೂ ಹೆಚ್ಚು ಸಿದ್ದಿ ಕಲಾವಿದರು ನಟಿಸಿರುವುದು ಚಿತ್ರದ ನೈಜತೆಯನ್ನು ಹೆಚ್ಚಿಸಿದೆ.

ತಾಂತ್ರಿಕವಾಗಿ ಸಿನಿಮಾ ಅತ್ಯಂತ ಸಬಲವಾಗಿದ್ದು, ‘ಕಾಂತಾರ’ ಖ್ಯಾತಿಯ ಮಿಥುನ್ ಸಿಂಗ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಹರಿ ಅಜಯ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಏಳು ಹಾಡುಗಳಿಗೆ ರಾಜೇಶ್ ಕೃಷ್ಣನ್, ಇಂದು ನಾಗರಾಜ್ ಅವರಂತಹ ಖ್ಯಾತ ಗಾಯಕರು ಧ್ವನಿಯಾಗಿದ್ದಾರೆ. ಯಶವಂತ್ ಅವರ ಛಾಯಾಗ್ರಹಣ ಮತ್ತು ಕೆಜಿಎಫ್ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ. ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅಯ್ಯಪ್ಪ ಶರ್ಮ ಹಾಗೂ ಗೀತಾ ಸಿದ್ದಿ ಅವರಂತಹ ಅನುಭವಿ ಕಲಾವಿದರ ದಂಡೇ ಚಿತ್ರದಲ್ಲಿದ್ದು, 1995ರ ಕಾಲಘಟ್ಟದ ಮಣ್ಣಿನ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಚಿತ್ರತಂಡ ಸಿದ್ಧವಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments