ಸಾತಾಂಕುಲಂ ಹಂತಕರಿಗೆ ಮರಣದಂಡನೆ;ತೀರ್ಪಿನ ಬಗ್ಗೆ ಕಮಲ್ ಹಾಸನ್ ಖಡಕ್ ಮಾತು!

ತಮಿಳುನಾಡಿನ ಸಾತಾಂಕುಲಂನಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಭೀಕರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪಿನ ಬಗ್ಗೆ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರು ಸುದೀರ್ಘವಾದ ಪ್ರತಿಕ್ರಿಯೆ ನೀಡಿದ್ದಾರೆ. ಅಂದಿನ ಲಾಕ್‌ಡೌನ್ ಸಮಯದಲ್ಲಿ ನಡೆದ ಈ ತಂದೆ-ಮಗನ ಕ್ರೂರ ಹತ್ಯೆಗೆ ಕಾರಣರಾದ 9 ಮಂದಿ ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದನ್ನು ಅವರು ಸ್ವಾಗತಿಸಿದ್ದಾರೆ. ರಕ್ಷಕರೇ ಭಕ್ಷಕರಾದಾಗ ಮೃತ್ಯುದಂಡನೆಯೇ ಗತಿ ಎಂಬಂತೆ ಈ ತೀರ್ಪು ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ತೀರ್ಪಿನ ಬಗ್ಗೆ ಮಾತನಾಡಿದ ಕಮಲ್ ಹಾಸನ್, ಅಧಿಕಾರದ ಮದದಲ್ಲಿ ಅಮಾಯಕರ ಪ್ರಾಣ ತೆಗೆದವರಿಗೆ ಇದು ನ್ಯಾಯಾಲಯ ನೀಡಿರುವ ತಕ್ಕ ಉತ್ತರ ಎಂದು ಶ್ಲಾಘಿಸಿದ್ದಾರೆ. ಸುಮಾರು ಆರು ವರ್ಷಗಳ ಸುದೀರ್ಘ ಹೋರಾಟದ ನಂತರ ಜಯರಾಜ್ ಮತ್ತು ಬೆನ್ನಿಕ್ಸ್ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ವೈಯಕ್ತಿಕವಾಗಿ ತಾವು ಮರಣದಂಡನೆ ಶಿಕ್ಷೆಯ ವಿರೋಧಿ ಎಂದು ಹೇಳಿರುವ ಅವರು, ಇಂತಹ ಹೇಯ ಕೃತ್ಯ ಎಸಗಿದವರಿಗೆ ಯಾವುದೇ ರಿಯಾಯಿತಿ ಇಲ್ಲದೆ ಜೀವನ ಪರ್ಯಂತ ಕಠಿಣ ಜೈಲು ಶಿಕ್ಷೆ ನೀಡಬೇಕು ಎನ್ನುವುದು ತಮ್ಮ ಆಶಯ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕೇವಲ ಪೊಲೀಸರಷ್ಟೇ ಅಲ್ಲದೆ, ಗಾಯಗೊಂಡಿದ್ದ ಸಂತ್ರಸ್ತರನ್ನು ಪರೀಕ್ಷಿಸದೆ ಫಿಟ್ನೆಸ್ ಸರ್ಟಿಫಿಕೇಟ್ ಕೊಟ್ಟ ವೈದ್ಯರು ಮತ್ತು ಸತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು ಎಂದು ಕಮಲ್ ಹಾಸನ್ ಆಗ್ರಹಿಸಿದ್ದಾರೆ. ಅಧಿಕಾರದ ಅಮಲಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ಈ ತೀರ್ಪು ಒಂದು ದೊಡ್ಡ ಎಚ್ಚರಿಕೆಯಾಗಿದೆ. ಮಧುರೈ ಕೋರ್ಟ್‌ನ ಈ ಬೆಚ್ಚಿಬೀಳಿಸುವ ತೀರ್ಪು ಪೊಲೀಸ್ ದೌರ್ಜನ್ಯದ ವಿರುದ್ಧ ಸಿಕ್ಕ ದೊಡ್ಡ ಜಯವಾಗಿದ್ದು, ಸಂತ್ರಸ್ತ ಕುಟುಂಬದ ದೀರ್ಘಕಾಲದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.




