DAVANAGEREರಾಜಕೀಯಸುದ್ದಿ

ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ನಡುವೆ ಮಾತಿನ ಫೈಟ್

ದಾವಣಗೆರೆ: ‘ಬೆಣ್ಣೆ ನಗರಿ’ ದಾವಣಗೆರೆಯಲ್ಲಿ ವಿಧಾನಸಭಾ ಉಪಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಎಸ್‌ಡಿಪಿಐ (SDPI) ಕಾರ್ಯಕರ್ತರ ನಡುವೆ ನಡುರಸ್ತೆಯಲ್ಲೇ ಭೀಕರ ವಾಕ್ಸಮರ ನಡೆದಿದ್ದು, ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತ್ತು. ನಗರದ ಮಿಲ್ಲತ್ ಕಾಲೇಜು ಮುಂಭಾಗದಲ್ಲಿ ಮತದಾರರ ಸಹಾಯಕ್ಕಾಗಿ ಟೇಬಲ್ ಹಾಕುವ ಸಣ್ಣ ವಿಚಾರಕ್ಕೆ ಆರಂಭವಾದ ಕಿತ್ತಾಟವು ದೊಡ್ಡ ಮಟ್ಟದ ಗಲಾಟೆಗೆ ಕಾರಣವಾಯಿತು. ಕಾಂಗ್ರೆಸ್ ಮುಖಂಡ ಅಯ್ಯೂಬ್ ಪೈಲ್ವಾನ್ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದ್ದರಿಂದ ನೂರಾರು ಬೆಂಬಲಿಗರು ಸ್ಥಳದಲ್ಲಿ ಜಮಾಯಿಸಿ ಪರಸ್ಪರ ಘೋಷಣೆಗಳನ್ನು ಕೂಗತೊಡಗಿದರು.

ಘಟನಾ ಸ್ಥಳದಲ್ಲಿ ಜಮಾಯಿಸಿದ ಎರಡೂ ಪಕ್ಷಗಳ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಉಭಯ ಗುಂಪುಗಳನ್ನು ಚದುರಿಸುವ ಮೂಲಕ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದರು. ಮತದಾನದ ಹೊತ್ತಲ್ಲೇ ನಡೆದ ಈ ರಾಜಕೀಯ ಸಂಘರ್ಷವು ದಾವಣಗೆರೆ ಅಖಾಡದಲ್ಲಿ ಕಾವೇರಿರುವ ಪೈಪೋಟಿಗೆ ಸಾಕ್ಷಿಯಾಗಿದ್ದು, ಸದ್ಯ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಎರಡೂ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಚುನಾವಣಾ ಕಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Comments (0)

Your email address will not be published. Required fields are marked *

Back to top button