ಜಿಲ್ಲೆಸುದ್ದಿ

40 ಲಕ್ಷ ಹಣದ ಆಸೆ ಮತ್ತು ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು!

ತುಮಕೂರು: ಶ್ರೀನಗರದಲ್ಲಿ ಮಗಳೊಬ್ಬಳು ತನ್ನ ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 55 ವರ್ಷದ ಪುಷ್ಪಲತಾ ಮೃತ ದುರ್ದೈವಿಯಾಗಿದ್ದು, ಇವರನ್ನು ಸ್ವಂತ ಮಗಳು ಸುಚಿತ್ರಾ (35) ಹಣದ ಆಸೆ ಹಾಗೂ ಮೂಢನಂಬಿಕೆಯ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಮೃತ ಪುಷ್ಪಲತಾ ಅವರ ಹೆಸರಿನಲ್ಲಿದ್ದ ಒಂದು ಮನೆ ಮತ್ತು ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 40 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಈ ಕೃತ್ಯ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಭೀಕರ ಕೊಲೆಗೆ ಮತ್ತೊಂದು ಆಘಾತಕಾರಿ ಕಾರಣವೂ ಕೇಳಿಬಂದಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಸುಚಿತ್ರಾಳ ತಂದೆ ನಿಧನರಾಗಿದ್ದರು. ತಾಯಿಯೇ ಮಾಟ ಮಂತ್ರ ಮಾಡಿಸಿ ತಂದೆಯನ್ನು ಕೊಂದಿದ್ದಾಳೆ ಎಂದು ಯಾರೋ ಒಬ್ಬ ಜ್ಯೋತಿಷಿ ಹೇಳಿದ್ದನಂತೆ. ಈ ಜ್ಯೋತಿಷಿಯ ಮಾತನ್ನು ಕುರುಡಾಗಿ ನಂಬಿದ್ದ ಮಗಳು ಸುಚಿತ್ರಾ, ತಾಯಿಯ ಮೇಲೆ ದ್ವೇಷ ಸಾಧಿಸಿ ಈ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕೊಲೆಗೈದ ಮಗಳು ಸುಚಿತ್ರಾ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಆಕೆಯ ಪತಿ ಸುರೇಶ್‌ನನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ. ಹಣದ ಆಸೆ ಮತ್ತು ಮೂಢನಂಬಿಕೆ ಹೇಗೆ ಮನುಷ್ಯನ ಸಂಬಂಧಗಳನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button