ಸ್ಯಾಂಡಲ್‌ವುಡ್ ನಟ ದರ್ಶನ್ ಅವರ 49ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದಾಸನ ಅಭಿಮಾನಿಗಳು ಈ ಬಾರಿ ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲು ಸಜ್ಜಾಗಿದ್ದಾರೆ. ದರ್ಶನ್ ಪ್ರಸ್ತುತ ಜೈಲಿನಲ್ಲಿದ್ದರೂ, ಅವರ ಮೇಲಿನ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಅವರು ನಡೆಸುತ್ತಿರುವ ವಿಶೇಷ ಪೂಜೆ ಮತ್ತು ಹೋಮಗಳೇ ಸಾಕ್ಷಿ. ಜೈಲುವಾಸದ ಸಂಕಷ್ಟಗಳು ದೂರಾಗಿ ದರ್ಶನ್ ಶೀಘ್ರದಲ್ಲೇ ಮನೆಗೆ ಮರಳಲಿ ಎಂಬ ಆಶಯದೊಂದಿಗೆ ಬೆಂಗಳೂರಿನ ಜೆ.ಪಿ. ನಗರದ ಪುಟ್ಟೇನಹಳ್ಳಿಯ ನಂಜುಂಡೇಶ್ವರ ದೇವಾಲಯದಲ್ಲಿ ಇಂದು ನವಗ್ರಹ ಶಾಂತಿ, ಮೃತ್ಯುಂಜಯ ಹೋಮ, ಗಣಪತಿ ಹಾಗೂ ದುರ್ಗಾ ಹೋಮಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗುತ್ತಿದೆ.

ಕೇವಲ ಹೋಮಗಳಷ್ಟೇ ಅಲ್ಲದೆ, ಫೆಬ್ರವರಿ 15ರಂದು ನಂಜುಂಡೇಶ್ವರನಿಗೆ ವಿಶೇಷ ರುದ್ರಾಭಿಷೇಕ ಮಾಡಿಸಿ, ದರ್ಶನ್ ಕುಟುಂಬದ ಹೆಸರಿನಲ್ಲಿ ಸಂಕಲ್ಪ ಮಾಡಲಾಗುತ್ತಿದೆ. ಹುಟ್ಟುಹಬ್ಬದ ದಿನವಾದ ಫೆಬ್ರವರಿ 16ಕ್ಕೆ ಸುಮಾರು 10 ಸಾವಿರ ಜನರಿಗೆ ಅನ್ನದಾನ ಮಾಡುವ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲಿನ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ, ದರ್ಶನ್ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದ ‘ಕರಿಯ’ ಸಿನಿಮಾ ಮರು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ. ಚಿತ್ರಮಂದಿರಗಳ ಮುಂದೆ “ಕೆಂಚಾಲೋ ಮಂಚಾಲೋ” ಹಾಡಿಗೆ ಹೆಜ್ಜೆ ಹಾಕುತ್ತಾ ಬಾಸ್ ಬರ್ತ್‌ಡೇಯನ್ನು ಸ್ವಾಗತಿಸಲು ಫ್ಯಾನ್ಸ್ ಕಾತುರರಾಗಿದ್ದಾರೆ.

ಕಾನೂನು ಪ್ರಕ್ರಿಯೆಗಳ ಬಗ್ಗೆ ಮಾತನಾಡಿರುವ ವಕೀಲರು, ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ ಎಂದು ತಿಳಿಸಿದ್ದಾರೆ. ಸಾಕ್ಷಿಗಳು ಈಗಾಗಲೇ ನ್ಯಾಯಾಲಯಕ್ಕೆ ಹೇಳಿಕೆ ನೀಡಿ ದಾಖಲಾಗಿರುವುದರಿಂದ, ಆರೋಪಿಗಳು ಹೊರಬಂದರೂ ಸಾಕ್ಷ್ಯ ನಾಶಪಡಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಜಾಮೀನು ಸಿಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಭಿಮಾನಿಗಳು ಸಲ್ಲಿಸುತ್ತಿರುವ ಈ ಪ್ರಾರ್ಥನೆ ಮತ್ತು ಹೋಮಗಳ ಫಲವಾಗಿ ದರ್ಶನ್ ಅವರ ಜೈಲುವಾಸದ ಕರಾಳ ದಿನಗಳು ಅಂತ್ಯಗೊಂಡು, ಅವರು ಶೀಘ್ರವೇ ಮುಖ್ಯವಾಹಿನಿಗೆ ಮರಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.


