ಜಿಲ್ಲೆರಾಜ್ಯಸುದ್ದಿ

ಕೋರ್ಟ್ ಮೆಟ್ಟಿಲೇರಿದ ದಂಪತಿ ಕಲಹ: ನ್ಯಾಯಾಧೀಶರ ಮುಂದೆಯೇ ವಿಷ ಸೇವನೆ

ಬಾಗಲಕೋಟೆ : ಬನಹಟ್ಟಿ ನ್ಯಾಯಾಲಯದ ಆವರಣದಲ್ಲಿ ದಂಪತಿಗಳ ಕಲಹ ವಿಕೋಪಕ್ಕೆ ಹೋಗಿ, ಪತಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ಜೀವನಾಂಶ ಪ್ರಕರಣದ ಮೊದಲ ವಿಚಾರಣೆ ನಡೆಯುತ್ತಿದ್ದಾಗಲೇ ಪತಿ ಯಾಕೂಬ್ ದೊಡ್ಡಮನಿ ತಿಗಣೆ ಔಷಧಿ ಸೇವಿಸಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.

ಜಗದಾಳ ಗ್ರಾಮದ ನಿವಾಸಿಯಾದ ಯಾಕೂಬ್ ಮತ್ತು ಮಾಲವ್ವ ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಹಣಕಾಸಿನ ವಿಚಾರ ಮತ್ತು ಜೀವನ ನಿರ್ವಹಣೆ ಕುರಿತು ದಂಪತಿಗಳ ನಡುವೆ ಸತತ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತ ಪತ್ನಿ ಮಾಲವ್ವ, ಜೀವನ ನಿರ್ವಹಣೆಗೆ ಪರಿಹಾರ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಸಮಯದಲ್ಲಿ ಮಾನಸಿಕ ಒತ್ತಡಕ್ಕೊಳಗಾದ ಯಾಕೂಬ್, ಎಲ್ಲರ ಮುಂದೆಯೇ ವಿಷ ಸೇವಿಸಿದ್ದಾನೆ.

ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ. ಯಾಕೂಬ್ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಇಂತಹ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪತಿ-ಪತ್ನಿಯರ ಈ ಜಗಳ ಹಾಗೂ ಆತ್ಮಹತ್ಯೆಯಂತಹ ವಿಪರೀತ ನಿರ್ಧಾರಗಳು ಅವರ ಇಬ್ಬರು ಮುಗ್ಧ ಮಕ್ಕಳ ಭವಿಷ್ಯದ ಮೇಲೆ ಕರಾಳ ಛಾಯೆ ಮೂಡಿಸಿವೆ.

Comments (0)

Your email address will not be published. Required fields are marked *

Back to top button