ವರದಿ : ಕುಮಾರ್ , ಕೋಲಾರ
ಕೋಲಾರ : ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಅವರ ಹೇಳಿಕೆ ವೈಯಕ್ತಿಕ. ಕಾಂಗ್ರೆಸ್ ಪಕ್ಷಕ್ಕೂ ಬಾಲಕೃಷ್ಣ ಅವರ ಹೇಳಿಕೆಗೂ ಸಂಬಂಧವಿಲ್ಲ. ಲೋಕಸಭಾ ಚುನಾವಣಾ ಬಳಿಕ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಹೇಳಿದ್ದಾರೆ.
ಮಾಲೂರು ತಾಲೂಕಿನ ಟೇಕಲ್ ನಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಐಟಿಐ ಕಾಲೇಜಿಗೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕೆ.ವೈ. ನಂಜೇಗೌಡ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಪಡೆಯದಿದ್ದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದು ಒಳ್ಳೆಯದು ಅಂತ ಬಾಲಕೃಷ್ಣ ಅವರ ಹೇಳಿಕೆ ವೈಯಕ್ತಿಕ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಸರ್ಕಾರದ ಹೇಳಿಕೆಯಲ್ಲ. ಹೆಚ್.ಸಿ.ಬಾಲಕೃಷ್ಣ ಅವರು ವೈಯಕ್ತಿಕವಾಗಿ ಹೇಳಿಕೆ ನೀಡಿದ್ದಾರಷ್ಟೇ. ಅವರ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ.
ನುಡಿದಂತೆ ನುಡಿಯುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ಲೋಕಸಭಾ ಚುನಾವಣೆ ಬಳಿಕ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ನಿಲ್ಲಿಸುವುದಿಲ್ಲ. ಇದನ್ನು ಸಿಎಂ ಸಿದ್ದರಾಮಯ್ಯ ಹಲವು ಬಾರಿ ಹೇಳಿದ್ದಾರೆ. ನಮ್ಮ ಸರ್ಕಾರ ಬಡವರ ಪರ ಇರುವ ಸರ್ಕಾರ. ಬಡವರಿಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದೆ.
ಶ್ರೀರಾಮ ಬಿಜೆಪಿ ಪಕ್ಷದವರ ಸೃಷ್ಟಿಯಲ್ಲ, ಪ್ರತಿಯೊಬ್ಬರ ಮನೆಯಲ್ಲಿ ರಾಮ ಇದ್ದಾನೆ. ಹಿಂದೂಗಳು ಸೇರಿದಂತೆ ಮುಸ್ಲಿಮ್ ನವರಿಗೂ ಶ್ರೀರಾಮನ ಇತಿಹಾಸ ಗೊತ್ತಿದೆ. ಆದರೆ ಬಿಜೆಪಿಯವರು ರಾಜಕೀಯ ಅನುಕೂಲಕ್ಕಾಗಿ ರಾಮನನ್ನು ಬಳಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಗ್ರಾಮದಲ್ಲಿಯೂ ದೇವಾಲಯಗಳಿವೆ. ಪ್ರತಿಯೊಬ್ಬರ ಮನೆಯಲ್ಲೂ ರಾಮನಿಗೆ ಪೂಜೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ 100% ಬಡವರ ಪಕ್ಷವಾಗಿದೆ. ಆದ್ರೆ ಬಿಜೆಪಿಯವರು ಯುವಕರನ್ನು ಯಾಮಾರಿಸಲು ಈ ರೀತಿಯ ಗಿಮ್ಮಿಕ್ಕು ಮಾಡ್ತಾರೆ. ಪ್ರತೀ ಲೋಕಸಭಾ ಚುನಾವಣೆ ಸಮಯಕ್ಕೆ ಬಿಜೆಪಿಯವರು ಈ ತರದ್ದು ಏನಾದ್ರು ತರ್ತಾರೆ. ರಾಮನ ಹೆಸರೇಳಿಕೊಂಡು ಹೊರಟಿದ್ದಾರೆ. ಆದ್ರೆ ಇವು ಹೆಚ್ಚು ದಿನ ನಡೆಯುವುದಿಲ್ಲ .
ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ಯಾರನ್ನೇ ಅಭ್ಯರ್ಥಿ ಮಾಡಿದ್ರೂ ಅವರನ್ನು ಗೆಲ್ಲಿಸುತ್ತೇವೆ. ಪಾರ್ಲಿಮೆಂಟ್ ಮೆಂಬರ್ ಅಂದ್ರೆ ಒಂದು ರೆಸ್ಪೆಕ್ಟ್ ಇತ್ತು. ಆದ್ರೆ ಕೆಟ್ಟ ಬಿಜೆಪಿ ಸಂಸದರನ್ನು ಬದಲಾವಣೆ ಮಾಡಲು ಜನ ಬಯಸಿದ್ದಾರೆ ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ.