Top Newsರಾಜಕೀಯರಾಜ್ಯಸುದ್ದಿ

80% ಕಮಿಷನ್ ಸರ್ಕಾರ; ಕಸದ ಟೆಂಡರ್‌ನಲ್ಲೂ ‘ಮಾಫಿಯಾ’ ಅಟ್ಟಹಾಸ ಎಂದ ಆರ್ ಅಶೋಕ್

ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘವು ಮಾಡಿರುವ ’80 ಪರ್ಸೆಂಟ್ ಕಮಿಷನ್’ ಆರೋಪವು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಬಿಜೆಪಿ ಸರ್ಕಾರವಿದ್ದಾಗ 40% ಕಮಿಷನ್ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲದಿದ್ದರೂ ಬೊಬ್ಬೆ ಹೊಡೆದಿದ್ದ ಕಾಂಗ್ರೆಸ್ ನಾಯಕರು, ಈಗ ತಮ್ಮ ಮೇಲಿನ ಆರೋಪಕ್ಕೆ ಸಾಕ್ಷಿ ಕೇಳುತ್ತಿರುವುದು ಏಕೆ?” ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಮೇಲಿನ ಆರೋಪಗಳು ಗಂಭೀರವಾಗಿದ್ದು, ಒಂದು ವೇಳೆ ಗುತ್ತಿಗೆದಾರರು ಮಾಡುತ್ತಿರುವುದು ಸುಳ್ಳು ಆರೋಪವೇ ಆಗಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಅಶೋಕ್ ಸವಾಲು ಹಾಕಿದರು. ಕಸದ ಟೆಂಡರ್ ವಿಚಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ವಿವರಿಸಿದ ಅವರು, “ಕಸದ ಟೆಂಡರ್ ಪಡೆಯಲು 7%, ಬಿಲ್ ಬಿಡುಗಡೆಗೆ 7% ಮತ್ತು ವಿಶೇಷ ಎಲ್‌ಒಸಿ ಪಡೆಯಲು 7% ಹೀಗೆ ಒಟ್ಟಾರೆ 21% ಕಮಿಷನ್ ಸರ್ಕಾರಕ್ಕೆ ಹೋಗುತ್ತಿದೆ. ಇದಲ್ಲದೆ ಇಂಜಿನಿಯರ್‌ಗಳಿಗೆ ಪ್ರತ್ಯೇಕ ಕಮಿಷನ್ ನೀಡಬೇಕಿದೆ. ಇದು ಕೇವಲ ಟೆಂಡರ್ ಅಲ್ಲ, ಒಂದು ದೊಡ್ಡ ಮಾಫಿಯಾ” ಎಂದು ಆಕ್ರೋಶ ಹೊರಹಾಕಿದರು.

ರಾಜ್ಯದ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ಗಳು ಸ್ಥಳೀಯ ಗುತ್ತಿಗೆದಾರರ ಕೈತಪ್ಪಿ ನೆರೆಯ ಆಂಧ್ರಪ್ರದೇಶದ ಗುತ್ತಿಗೆದಾರರ ಪಾಲಾಗುತ್ತಿವೆ ಎಂದು ದೂರಿದರು. ವಿಶೇಷವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಾಮಗಾರಿಗಳನ್ನು ಸ್ಥಳೀಯರಿಗೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶ ನಿರ್ಬಂಧಿಸಿರುವ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದ್ದು, ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆ ಎಂದು ಬಣ್ಣಿಸಿದರು.

ಬರುವ ಸ್ಥಳೀಯ ಸಂಸ್ಥೆಗಳ ಹಾಗೂ ಜಿಬಿಎ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಕುರಿತು ಮಾತನಾಡಿದ ಅಶೋಕ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಮೈತ್ರಿ ಸುಗಮವಾಗಿ ಸಾಗಲಿದೆ ಎಂದು ಭರವಸೆ ನೀಡಿದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಶೀಘ್ರವೇ ಬಗೆಹರಿಸಿಕೊಳ್ಳಲಾಗುವುದು ಮತ್ತು ಹೈಕಮಾಂಡ್ ನಿರ್ದೇಶನದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Comments (0)

Your email address will not be published. Required fields are marked *

Back to top button