ಜಿಲ್ಲೆಸುದ್ದಿ

ಚಿಕ್ಕಮಗಳೂರು ಆನೆ ದಾಳಿ; ರಣಾಂಗಣವಾದ ಕಾಫಿನಾಡು ,ಶೃಂಗೇರಿ ಬಂದ್‌ಗೆ ಕರೆ.!

ಚಿಕ್ಕಮಗಳೂರು: ಕಾಡಾನೆ ಹಾವಳಿ ಮಿತಿಮೀರಿದ್ದು, ಕೇವಲ ಏಳು ದಿನಗಳ ಅಂತರದಲ್ಲಿ ಒಂದೇ ಭಾಗದಲ್ಲಿ ಇಬ್ಬರು ಬಲಿಯಾಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಾರದ ಹಿಂದಷ್ಟೇ ಹಾವೇರಿ ಮೂಲದ ಯಲ್ಲಪ್ಪ ಎಂಬ ಕಾರ್ಮಿಕ ಆನೆ ದಾಳಿಗೆ ತುತ್ತಾಗಿದ್ದರು. ಈ ಘಟನೆ ಬೆನ್ನಲ್ಲೇ ಅರಣ್ಯ ಇಲಾಖೆ ಆನೆಯನ್ನು ಹಿಡಿಯುವ ಭರವಸೆ ನೀಡಿತ್ತಾದರೂ, ಈಗ ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಬೋರಮ್ಮ ಎಂಬ ಮಹಿಳೆ ಪುರ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಈ ಸರಣಿ ಸಾವುಗಳಿಂದ ಕಂಗೆಟ್ಟ ಮಲೆನಾಡು ಭಾಗದ ಜನರು ಸರ್ಕಾರದ ವಿರುದ್ಧ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಸಾವಿರಾರು ಜನರು ಕಡಬಗೆರೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಮೃತ ಮಹಿಳೆಯ ಶವವನ್ನು ರಸ್ತೆಯಲ್ಲೇ ಇಟ್ಟು ಪ್ರತಿಭಟನೆ ನಡೆಸಿದರು. ಮೃತರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ರಸ್ತೆಯಲ್ಲೇ ಶಾಮಿಯಾನ ಹಾಕಿ ಧರಣಿ ಕುಳಿತರು. ಈ ಪ್ರತಿಭಟನೆಯಿಂದಾಗಿ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಎರಡು ಕಿಲೋಮೀಟರ್‌ವರೆಗೂ ವಾಹನ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಯಿತು.

ಪ್ರತಿಭಟನಾ ಸ್ಥಳಕ್ಕೆ ಮಧ್ಯಾಹ್ನದ ವೇಳೆಗೆ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿದಾಗ ಜನರು ಅವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲು ಮುಂದಾದಾಗ, ಪ್ರತಿಭಟನಾಕಾರರು ಅಡ್ಡ ಕುಳಿತು ತಡೆಯೊಡ್ಡಿದರು. ಇದರಿಂದಾಗಿ ಪೊಲೀಸರು ಮತ್ತು ಜನರ ನಡುವೆ ತಳ್ಳಾಟ-ನೂಕಾಟ ಉಂಟಾಗಿ ಪರಿಸ್ಥಿತಿ ಕೈಮೀರಿತು.

ಉದ್ರಿಕ್ತ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು, ಮಾಜಿ ಶಾಸಕ ಜೀವರಾಜ್ ಮತ್ತು ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು. ಲಾಠಿಚಾರ್ಜ್ ಘಟನೆಯು ಪ್ರತಿಭಟನಾಕಾರರ ಸಿಟ್ಟನ್ನು ಮತ್ತಷ್ಟು ಹೆಚ್ಚಿಸಿದ್ದು, ಜಿಲ್ಲಾಡಳಿತದ ಧೋರಣೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಜಿಲ್ಲಾಧಿಕಾರಿ ನಾಗರಾಜ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಜನರನ್ನು ಚದುರಿಸಲು ಕ್ರಮ ಕೈಗೊಳ್ಳಲಾಗಿದೆಯೇ ಹೊರತು ದೊಡ್ಡ ಮಟ್ಟದ ಲಾಠಿಚಾರ್ಜ್ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಜಿಲ್ಲಾಡಳಿತ ಮತ್ತು ಪೊಲೀಸರ ಕ್ರಮವನ್ನು ಖಂಡಿಸಿರುವ ಬಿಜೆಪಿ, ರೈತ ಸಂಘಟನೆಗಳು ಹಾಗೂ ಮಲೆನಾಡು ನಾಗರಿಕ ರಕ್ಷಣಾ ವೇದಿಕೆ ನಾಳೆ ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್‌ಗೆ ಕರೆ ನೀಡಿವೆ.

Comments (0)

Your email address will not be published. Required fields are marked *

Back to top button