Top Newsಜಿಲ್ಲೆರಾಜಕೀಯರಾಜ್ಯಸುದ್ದಿ

ದಾರಿ ತಪ್ಪಿದ ಮುಖ್ಯಮಂತ್ರಿಗಳ ಹೆಲಿಕಾಪ್ಟರ್? ಅಸಲಿ ನಡೆದಿದ್ದೇನು?

ರಾಯಚೂರು: ಲಿಂಗಸುಗೂರಿನಲ್ಲಿ ವಿವಿಐಪಿಗಳ ಆಗಮನದ ವೇಳೆ ಜಿಲ್ಲಾಡಳಿತದ ಅಧಿಕಾರಿಗಳ ಎಡವಟ್ಟಿನಿಂದಾಗಿ ಭಾರಿ ಹೈಡ್ರಾಮಾ ಸೃಷ್ಟಿಯಾಗಿದೆ. ಎಂಎಲ್‌ಸಿ ಶರಣಗೌಡ ಬಯ್ಯಾಪೂರ ಅವರ ಪುತ್ರನ ಮದುವೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವಿಚಾರದಲ್ಲಿ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಮುಜುಗರ ಉಂಟಾಗಿದೆ.

ಸಿಎಂ ಅವರಿಗಾಗಿ ರಾಯಚೂರು ರಸ್ತೆಯಲ್ಲಿ ಪ್ರತ್ಯೇಕ ಹೆಲಿಪ್ಯಾಡ್ ಸಿದ್ಧಪಡಿಸಿ ಅಧಿಕಾರಿಗಳು ಹೂಗುಚ್ಛ ಹಿಡಿದು ಕಾಯುತ್ತಿದ್ದರೆ, ಅಲ್ಲಿಗೆ ಅನಿರೀಕ್ಷಿತವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಲಿಕಾಪ್ಟರ್ ಬಂದು ಇಳಿಯಿತು. ಇದರಿಂದ ಕಕ್ಕಾಬಿಕ್ಕಿಯಾದ ಅಧಿಕಾರಿಗಳಿಗೆ ಅಸಲಿ ಶಾಕ್ ಕಾದಿದ್ದು

ಸಚಿವರಿಗಾಗಿ ಮೀಸಲಿದ್ದ ಜಾಗದಲ್ಲಿ ಸಿಎಂ ಹೆಲಿಕಾಪ್ಟರ್ ಇಳಿಯಬೇಕಾದ ಗೊಂದಲ ಉಂಟಾಗಿ, ಕೊನೆಗೆ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಕಲಬುರ್ಗಿ ರಸ್ತೆಯ ಶಾಸಕ ಮಾನಪ್ಪ ವಜ್ಜಲ್ ಅವರ ಖಾಸಗಿ ಹೆಲಿಪ್ಯಾಡ್‌ನಲ್ಲಿ ಇಳಿಯಿತು. ವಿಷಯ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಬೆವರುತ್ತಾ ಸಿಎಂ ಇದ್ದ ಸ್ಥಳಕ್ಕೆ ಓಡೋಡಿ ಹೋದ ಪ್ರಸಂಗ ನಡೆಯಿತು. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂಗಿಂತ ಮೊದಲೇ ಆಗಮಿಸಿ ಮದುವೆ ಕಾರ್ಯಕ್ರಮ ಮುಗಿಸಿ ಹುಬ್ಬಳ್ಳಿಯತ್ತ ತೆರಳಿದರು. ಒಂದೇ ಕಾರ್ಯಕ್ರಮಕ್ಕೆ ಇಬ್ಬರು ಪ್ರಭಾವಿ ನಾಯಕರು ಆಗಮಿಸಿದರೂ, ಇಬ್ಬರ ಸಮಯ ಮತ್ತು ಹೆಲಿಪ್ಯಾಡ್ ಸಂವಹನದಲ್ಲಿನ ವ್ಯತ್ಯಾಸದಿಂದಾಗಿ ಲಿಂಗಸುಗೂರು ಕೆಲಕಾಲ ಗೊಂದಲದ ಗೂಡಾಗಿತ್ತು.

Comments (0)

Your email address will not be published. Required fields are marked *

Back to top button