ಸಿನಿಮಾ

‘ಛಾವ’ ಚಿತ್ರಕ್ಕೆ ಒಂದು ವರ್ಷ; 600 ಕೋಟಿ ಗಳಿಸಿದ್ದ ಸಿನಿಮಾ ನೆನಪಿನಲ್ಲಿ ರಶ್ಮಿಕಾ-ವಿಕ್ಕಿ!

ಐತಿಹಾಸಿಕ ಕಥಾಹಂದರ ಹೊಂದಿದ್ದ ‘ಛಾವ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ವಿಶೇಷ ಸಂದರ್ಭದಲ್ಲಿ ಚಿತ್ರದ ನಾಯಕ ವಿಕ್ಕಿ ಕೌಶಲ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಚಿತ್ರೀಕರಣದ ದಿನಗಳ ಸುಂದರ ನೆನಪುಗಳನ್ನು ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

2025ರ ಫೆಬ್ರವರಿ 14ರಂದು ಪ್ರೇಕ್ಷಕರ ಮುಂದೆ ಬಂದಿದ್ದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸಿತ್ತು. ವಿಶ್ವಾದ್ಯಂತ ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಮಟ್ಟದ ಯಶಸ್ಸು ದಾಖಲಿಸಿತ್ತು. ಛತ್ರಪತಿ ಸಂಭಾಜಿ ಮಹಾರಾಜ್ ಅವರ ಶೌರ್ಯದ ಗಾಥೆಯನ್ನು ತೆರೆಯ ಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದ ಈ ಸಿನಿಮಾವನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದರು.

ಚಿತ್ರದಲ್ಲಿ ವಿಕ್ಕಿ ಕೌಶಲ್ ಅವರು ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಅಬ್ಬರಿಸಿದ್ದರೆ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಚಿತ್ರದ ನೆನಪುಗಳನ್ನು ಹಂಚಿಕೊಂಡಿರುವ ರಶ್ಮಿಕಾ, “ಎಂಥ ವಿಶೇಷ ಸಿನಿಮಾ. ಧನ್ಯವಾದಗಳು” ಎಂದು ಭಾವನಾತ್ಮಕವಾಗಿ ಕ್ಯಾಪ್ಷನ್ ನೀಡಿದ್ದಾರೆ. ಈ ಪಾತ್ರದ ಮೂಲಕ ಅವರು ಬಾಲಿವುಡ್‌ನಲ್ಲೂ ತಮ್ಮ ಭದ್ರವಾದ ಸ್ಥಾನವನ್ನು ಸಾಬೀತುಪಡಿಸಿದ್ದಾರೆ.

ದಕ್ಷಿಣ ಭಾರತದಿಂದ ಬಾಲಿವುಡ್‌ವರೆಗೂ ರಶ್ಮಿಕಾ ಮಂದಣ್ಣ ಅವರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರು ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗುತ್ತಿದ್ದು, ‘ಮುಟ್ಟಿದ್ದೆಲ್ಲಾ ಚಿನ್ನ’ ಎಂಬಂತೆ ಅವರ ಯಶಸ್ಸಿನ ಓಟ ಮುಂದುವರಿದಿದೆ. ಸದ್ಯ ಹಂಚಿಕೊಂಡಿರುವ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಚಿತ್ರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button