ತಮಿಳು ಚಿತ್ರರಂಗದ ಕ್ಯಾಪ್ಟನ್ ವಿಜಯಕಾಂತ್ ಇನ್ನಿಲ್ಲ ,ಕೋವಿಡ್ ೧೯ ಪಾಸಿಟಿವ್ ಖಾತ್ರಿ ಬೆನ್ನಲ್ಲೇ ನಿಗಾ ಘಟಕದಲ್ಲಿ ದಾಖಲಾಗಿದ್ದ ವಿಜಯಕಾಂತ್ ವಿಧಿಯಾಟಕ್ಕೆ ಸೋತು ಶರಣಾಗಿದ್ದಾರೆ. ದ್ರಾವಿಡ ಸಮುದಾಯದ ಅಪ್ರತಿಮ ತಮಿಳು ನಟ ವಿಜಯಕಾಂತ್ ಬದುಕಿನ ಹಾದಿಯಲ್ಲಿ ಎದುರಿಸಿದ್ದ ಸವಾಲು ,ಯಾತನೆ ,ಅವಮಾನ ,ಸಂಕಟ ಎಲ್ಲವೂ ಅಲಿಖಿತವೇ. ಆಗಸ್ಟ್ 25, 1952 ರಂದು ಮದ್ಯಮ ಕುಟುಂಬದಲ್ಲಿ ಜನಿಸಿದ ವಿಜಯಕಾಂತ್ 1979 ರಲ್ಲಿ ಎಂಎ ಕಾಜಾ ಅವರ ‘ಇನಿಕ್ಕುಂ ಇಲಮೈ’ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಅಲ್ಲಿಂದ ಶುರುವಾದ ಸಿನಿರಂಗದ ಪಯಣದಲ್ಲಿ ಯಶಸ್ಸನ್ನೇ ಕಾಣುತ್ತ ಹೋದ್ರು. ತನ್ನ 100 ನೇ ಚಿತ್ರವಾದ ‘ಕ್ಯಾಪ್ಟನ್ ಪ್ರಭಾಕರನ್ ವರೆಗೂ ಗೆಲುವನ್ನೇ ಕಂಡ ವಿಜಯಕಾಂತ್ , ತನ್ನ ಸಿನಿ ಪಯಣದಲ್ಲಿ ಕಂಡ ಕೆಲ ಕೆಟ್ಟ ಕ್ಷಣಗಳನ್ನ ಸಾಕಷ್ಟು ಬಾರಿ ಬಹಿರಂಗಾಗಿ ಹಂಚಿಕೊಂಡಿದ್ರು.
ತನ್ನ ಮೈ ಬಣ್ಣವನ್ನ ಮೂದಲಿಸಿ ಮಾಡುತ್ತಿದ್ದ ಅವಮಾನ ,ದ್ರಾವಿಡ ಸಮುದಾಯದ ವ್ಯಕ್ತಿತ್ವ ಗಳಿಸೋ ಖ್ಯಾತಿ ಪ್ರಚಾರಕ್ಕೆ ಬಾರದೆ ಇರುವುದರ ಬಗ್ಗೆಯೂ ಗದ್ಗದಿತರಾಗಿ ನೋವನ್ನ ಹಂಚಿಕೊಂಡಿದ್ರು. ಸಾಮಾನ್ಯವಾಗಿ ದ್ರಾವಿಡ ಸಮುದಾಯ ಪ್ರತಿಭೆಯ ಆಗರ ಅಂದ್ರು ತಪ್ಪಾಗಲಾರದು ,ವಿಜಯಕಾಂತ್ ನಂತೆ ಅದೆಷ್ಟೋ ವ್ಯಕ್ತಿತ್ವದ ಪ್ರತಿಭೆಗಳೇ ಸಾಕ್ಷಿ.

ಪಕ್ಷ ಕಟ್ಟೋ ಕನಸು ನನಸಾಗಿತ್ತು!
ತಮಿಳು ರಾಜ್ಯದಲ್ಲಿ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳಿದ್ದರು ಕೂಡ ತನ್ನದೇ ಒಂದು ಪಕ್ಷವನ್ನ ರಚಿಸುವ ಕನಸು ಕಂಡಿದ್ದರು ವಿಜಯಕಾಂತ್. ಆ ಪಕ್ಷ ತನ್ನ ಸಿದ್ದಾ೦ತವನ್ನ ಮಾತ್ರ ಅನುಸರಿಸಬೇಕು ,ಸಾರ್ವಜನಿಕರಲ್ಲಾಗಲಿ ಇನ್ನಿತರ ಯಾವುದೇ ಮಾರ್ಗದಲ್ಲೂ ಪಕ್ಷಕ್ಕಾಗಿ ದೇಣಿಗೆ ಸಂಗ್ರಹ ಮಾಡ ಕೂಡದು ಎಂಬ ಬಲವಾದ ನಿಯಮಗಳನ್ನ ಜಾರಿ ಮಾಡಿದ್ರು.
ಅದರಂತೆ ಸೆಪ್ಟೆಂಬರ್ 14, 2005 ರಂದು, ವಿಜಯಕಾಂತ್ ಮಧುರೈನಲ್ಲಿ ತಮ್ಮ ಕನಸಿನ ರಾಜಕೀಯ ಪಕ್ಷವಾದ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಅಂದ್ರೆ DMDK ಪಕ್ಷವನ್ನ ರಚಿಸಿ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟರು. ಕೇವಲ ಒಂದು ವರ್ಷದಲ್ಲಿ, ಅವರು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟರು. ಪಕ್ಷ ರಚನೆಯಾದ ಮೊದಲ ಚುನಾವಣೆಯಲ್ಲಿ ಒಂದು ಸ್ಥಾನ ಮತ್ತು ಶೇಕಡಾ 10 ರಷ್ಟು ಮತಗಳನ್ನು ಗಳಿಸಿ ರಾಜ್ಯದ ಉಳಿದ ಪ್ರಾದೇಶಿಕ ಪಕ್ಷಕ್ಕೆ ಭಯ ಹುಟ್ಟಿಸುವಷ್ಟು ಬೆಳೆದು ನಿಂತರು .
ವಿಜಯಕಾಂತ್ ಹಂತ ಹಂತವಾಗಿ ಜನರ ಮೆಚ್ಚುಗೆಗೆ ಪಾತ್ರರಾದ್ರು. ಅವರು ತಮ್ಮ ಪಕ್ಷಕ್ಕೆ ದೇಣಿಗೆ ಕೇಳದೇ ಇದ್ದ ಪರಿಣಾಮವಾಗಿ ಜನರ ವಿಶ್ವಾಸವನ್ನ ಪಡೆದುಕೊಂಡರು . ಅಲ್ಲದೇ ವಿಜಯಕಾಂತ್ ಅವರು ತಮ್ಮ ಜೇಬಿನಿಂದ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಉಳಿದ ಪ್ರಾದೇಶಿಕ ಪಕ್ಷಗಳಿಗೆ ಕಂಟಕರಾದ್ರು . ಅಂತಿಮವಾಗಿ, ಡಿಎಂಡಿಕೆ ಯಾವುದೇ ಮೈತ್ರಿ ಇಲ್ಲದೆ ಸ್ಪರ್ಧಿಸಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು.
2011ರಲ್ಲಿ ಅವರು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಎಐಎಡಿಎಂಕೆ ಜೊತೆ ಸೇರಿ 41 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. 41 ಸ್ಥಾನಗಳಲ್ಲಿ ಸ್ಪರ್ಧಿಸಿ 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರು. ಆ ವರ್ಷ ಡಿಎಂಡಿಕೆ ದ್ರಾವಿಡ ಮುನ್ನೇತ್ರ ಕಳಗಂ ಗಿಂತ ಹೆಚ್ಚು ಸ್ಥಾನಗಳನ್ನು ಡಿಎಂಡಿಕೆ ಗೆದ್ದಿತ್ತು. ಆದರೆ ಒಂದೇ ವರ್ಷದಲ್ಲಿ ಎಐಎಡಿಎಂಕೆಯ ಜಯಲಲಿತಾ ನಡುವೆ ಭಿನ್ನಾಭಿಪ್ರಾಯ ಸ್ಪೋಟಗೊಳ್ತು.

ಅದರ ಪರಿಣಾಮವಾಗಿ 2014ರ ಸಂಸತ್ ಚುನಾವಣೆಯಲ್ಲಿ, ಡಿಎಂಕೆ, ಬಿಜೆಪಿ ಮತ್ತು ಇತರ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ರಾಜಕೀಯ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯಕಾಂತ್ ಅವರನ್ನು ಪ್ರಸ್ತಾಪಿಸಿ ತಮ್ಮ ಸ್ನೇಹಿತ ಎಂದು ಕರೆದಿದ್ದರು. ನಂತರ ಕೆಲವೇ ತಿಂಗಳಲ್ಲಿ ಅವರು ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನೂ ಕಳೆದುಕೊಂಡರು. ನಂತರ 2016ರ ಚುನಾವಣೆಯಲ್ಲಿ ವಿಜಯಕಾಂತ್ ಠೇವಣಿಯನ್ನೂ ಕಳೆದುಕೊಂಡು ಭಾರೀ ಸೋಲು ಕಂಡರೂ ,ಕ್ರಮೇಣವಾಗಿ ರಾಜಕೀಯ ಆಸಕ್ತಿ ಕಳೆದುಕೊಂಡಿದ್ದರು ,೨೦೨೨ ರಲ್ಲಿ ಕೋರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಬಳಿಕ ಒಂದರ ಹಿಂದೆ ಒಂದರಂತೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವಿಜಯಕಾಂತ್ ,ಇತ್ತೀಚಿಗೆ ಮತ್ತೆ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆ ದಾಖಲಾಗಿದ್ದರು.
71 ವರ್ಷ ವಯಸ್ಸಿನವರಾಗಿದ್ದ ವಿಜಯಕಾಂತ್ ಅವರ ಸಾವು ತಮಿಳುನಾಡಿನಾದ್ಯಂತ ಆಘಾತ ಉಂಟು ಮಾಡಿದ್ದು, ಸಾವಿರಾರು ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. ಕ್ಯಾಪ್ಟನ್ ಇನ್ನಿಲ್ಲ ಅನ್ನೋ ಸತ್ಯವನ್ನ ಒಪ್ಪಿಕೊಳ್ಳೋಕೆ ತಮಿಳುನಾಡಿನ ಜನ ತಯಾರಾಗಿಲ್ಲ ಅನ್ನುವಷ್ಟರ ಮಟ್ಟಿಗೆ ವಿಜಯ್ ಕಾಂತ್ ಛಾಪು ಉಳಿಸಿಕೊಂಡು ಅಂತಿಮ ವಿದಾಯ ಹೇಳಿದ್ದಾರೆ. ಮಿಸ್ ಯೂ ಕ್ಯಾಪ್ಟನ್.