ಚಿನ್ನದಾಸೆಗೆ ಫ್ಲೈಟ್ ಹತ್ತಿ ಬಂದ ಉದ್ಯಮಿಗೆ 20 ಲಕ್ಷ ದರೋಡೆ..!

ಬೆಂಗಳೂರು: ದೇವನಹಳ್ಳಿಯಲ್ಲಿ ಕಡಿಮೆ ಬೆಲೆಗೆ ಚಿನ್ನ ನೀಡುವ ಆಮಿಷ ತೋರಿಸಿ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ದರೋಡೆ ಮಾಡಿರುವ ಘಟನೆ ನಡೆದಿದೆ. 20 ಲಕ್ಷ ರೂಪಾಯಿಗೆ 1 ಕೆಜಿ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿದ ದುಷ್ಕರ್ಮಿಗಳ ಬಲೆಗೆ ಬಿದ್ದ ಉದ್ಯಮಿ ವಿಶ್ವಪ್ರಸಾದ್ ರೆಡ್ಡಿ, ಬಂಪರ್ ಆಫರ್ ಆಸೆಗೆ ಬಿದ್ದು ಹೈದರಾಬಾದ್‌ನಿಂದ ಫ್ಲೈಟ್ ಹತ್ತಿ ಬೆಂಗಳೂರಿಗೆ ಬಂದಿದ್ದರು. ಆದರೆ ಇಲ್ಲಿ ಅವರಿಗೆ ಕಾದಿದ್ದು ಮಾತ್ರ ದೊಡ್ಡ ಶಾಕ್.
ದೇವನಹಳ್ಳಿಯ ವೆಂಕಟಗಿರಿ ಕೋಟೆ ಗ್ರಾಮದ ಬಳಿ ಉದ್ಯಮಿಯನ್ನು ಬರಮಾಡಿಕೊಂಡ ಆರು ಮಂದಿ ದುಷ್ಕರ್ಮಿಗಳು, ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಉದ್ಯಮಿಯನ್ನು ಬೆದರಿಸಿ ಅವರಿಂದ 20 ಲಕ್ಷ ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ಲೂಟಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಎಂಬ ಹಪಾಹಪಿತನ ಉದ್ಯಮಿಯನ್ನು ಸಂಕಷ್ಟಕ್ಕೆ ದೂಡಿದೆ.
ಘಟನೆ ನಡೆದ ತಕ್ಷಣ ದೇವನಹಳ್ಳಿಯ ವಿಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉದ್ಯಮಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರು ಮಂದಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದಾರೆ. ದರೋಡೆಕೋರರು ಉದ್ಯಮಿಯನ್ನು ಸಂಪರ್ಕಿಸಿದ ರೀತಿ ಮತ್ತು ಅವರ ಹಿನ್ನೆಲೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಘಟನೆಯು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಅಪರಿಚಿತರು ನೀಡುವ ಇಂತಹ ಅತಿ ಕಡಿಮೆ ಬೆಲೆಯ ಆಫರ್‌ಗಳ ಬಗ್ಗೆ ಎಚ್ಚರದಿಂದಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಹೈದರಾಬಾದ್‌ನಿಂದ ಬಂದ ಉದ್ಯಮಿಯನ್ನೇ ಟಾರ್ಗೆಟ್ ಮಾಡಿ ಈ ಕೃತ್ಯ ಎಸಗಿರುವುದು ನೋಡಿದರೆ, ಇದರ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದೆ.




