Top Newsರಾಜಕೀಯರಾಜ್ಯಸುದ್ದಿ

ಖರ್ಗೆ ಹೇಳಿಕೆಗೆ ಉದ್ಯಮಿ ಮೋಹನ್ ದಾಸ್ ಪೈ ಕೆಂಡ!

ಮಂಗಳೂರು ನಗರದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಯ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ನಡುವೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತೀವ್ರ ವಾಗ್ಯುದ್ಧ ನಡೆದಿದೆ. ಕೋಮುವಾದದ ವಾತಾವರಣದಿಂದಾಗಿ ಮಂಗಳೂರಿಗೆ ಹೂಡಿಕೆದಾರರು ಬರಲು ಹಿಂಜರಿಯುತ್ತಿದ್ದಾರೆ ಎಂಬ ಸಚಿವರ ಹೇಳಿಕೆಯನ್ನು ಮೋಹನ್ ದಾಸ್ ಪೈ ಅವರು ಕಟುವಾಗಿ ಟೀಕಿಸಿದ್ದಾರೆ. ಸಚಿವರ ಈ ಮಾತುಗಳನ್ನು “ಅತ್ಯಂತ ಕೆಟ್ಟ ಜೋಕ್” ಎಂದು ಬಣ್ಣಿಸಿರುವ ಪೈ, ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ ಮತ್ತು ಆರ್ಥಿಕ ಶಕ್ತಿಯನ್ನು ಅಂಕಿಅಂಶಗಳ ಮೂಲಕ ಸಮರ್ಥಿಸಿಕೊಂಡಿದ್ದಾರೆ.

ಮೋಹನ್ ದಾಸ್ ಪೈ ಅವರು ಮಾತನಾಡಿ, ಬೆಂಗಳೂರನ್ನು ಹೊರತುಪಡಿಸಿದರೆ ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಜಿಲ್ಲೆ ದಕ್ಷಿಣ ಕನ್ನಡ. ಇಲ್ಲಿನ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ ಬೇರೆ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಒಂದು ವೇಳೆ ಸಚಿವರು ಹೇಳುವಂತೆ ಕೋಮುವಾದವೇ ಇಲ್ಲಿನ ಸಮಸ್ಯೆಯಾಗಿದ್ದರೆ, ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಿರಲಿಲ್ಲ ಎಂದು ಖರ್ಗೆ ಅವರಿಗೆ ನೇರ ಪ್ರಶ್ನೆ ಎಸೆದಿದ್ದಾರೆ.

ಈ ಟೀಕೆಗೆ ಮೌನವಾಗಿರದ ಪ್ರಿಯಾಂಕ್ ಖರ್ಗೆ ಅವರು ಮತ್ತೆ ಎಕ್ಸ್ ಮೂಲಕವೇ ಪೈ ಅವರಿಗೆ ತಿರುಗೇಟು ನೀಡಿದ್ದಾರೆ. ಸಮಸ್ಯೆಗಳ ಬಗ್ಗೆ ಕುರುಡಾಗಿದ್ದರೆ ವಾಸ್ತವ ತಿಳಿಯುವುದಿಲ್ಲ , ರಾಜ್ಯದ ಜಿಡಿಪಿಯಲ್ಲಿ ಬೆಂಗಳೂರಿನ ಪಾಲು 40% ಇದ್ದರೆ, ದಕ್ಷಿಣ ಕನ್ನಡದ ಪಾಲು ಕೇವಲ 5.4% ಮಾತ್ರ ಇದೆ . ಅಲ್ಲಿನ ಸ್ಥಳೀಯ ಕಾಮರ್ಸ್ ವಿಭಾಗವೇ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸುತ್ತಿರುವಾಗ, ವಾಸ್ತವವನ್ನು ಒಪ್ಪಿಕೊಳ್ಳಬೇಕು. ನಮ್ಮ ಸರ್ಕಾರ ಕರಾವಳಿ ಭಾಗದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.

Comments (0)

Your email address will not be published. Required fields are marked *

Back to top button