ರಾಯಚೂರು: ನಗರದ ಜನನಿಬಿಡ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು 21 ವರ್ಷದ ಯುವಕನ ಪ್ರಾಣವನ್ನು ಕ್ಷಣಾರ್ಧದಲ್ಲಿ ಬಲಿಪಡೆದಿದೆ. ಆಟೋ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯ ಓವರ್ಟೇಕ್ ಪ್ರಯತ್ನವು ಇಂದು ಮತ್ತೊಂದು ಕುಟುಂಬದ ಆಧಾರಸ್ತಂಭವನ್ನು ಕಿತ್ತುಕೊಂಡಿದೆ.
ರಾಯಚೂರು ನಗರದ ಸ್ಟೇಶನ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು. ಮೃತನನ್ನು 21 ವರ್ಷದ ಬಸವರಾಜ್ ಎಂದು ಗುರುತಿಸಲಾಗಿದೆ. ಬಸವರಾಜ್ ಆಶಾಪುರ ರಸ್ತೆಯಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಚಲಿಸುತ್ತಿದ್ದ ಆಟೋದಲ್ಲಿ ಹಿಂಭಾಗದ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದನು. ಆಟೋ ಚಾಲಕ ತಲುಪಬೇಕಾದ ಧಾವಂತದಲ್ಲಿದ್ದನೋ ಅಥವಾ ರಸ್ತೆಯ ಸ್ಪರ್ಧೆಯಲ್ಲಿದ್ದನೋ ಎಂಬಂತೆ ವಾಹನವನ್ನು ಅತೀ ವೇಗವಾಗಿ ಚಲಾಯಿಸುತ್ತಿದ್ದ ಎನ್ನಲಾಗಿದೆ.
ಆಟೋ ಚಲಿಸುತ್ತಿದ್ದ ರಸ್ತೆಯ ಎಡಭಾಗದಲ್ಲಿ ಮತ್ತೊಂದು ಆಟೋ ನಿಂತಿತ್ತು. ಅದನ್ನು ದಾಟಿಕೊಂಡು ಮುಂದೆ ಹೋಗುವ ಭರದಲ್ಲಿ, ಆಟೋ ಚಾಲಕ ತನ್ನ ಬಲಭಾಗದಲ್ಲಿ ಚಲಿಸುತ್ತಿದ್ದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸನ್ನು ಓವರ್ಟೇಕ್ ಮಾಡಲು ಯತ್ನಿಸಿದ್ದಾನೆ. ಅತೀ ವೇಗದಲ್ಲಿ ಆಟೋವನ್ನು ತಿರುಗಿಸಿದ ಪರಿಣಾಮ, ವಾಹನವು ನಿಯಂತ್ರಣ ತಪ್ಪಿ ಒಂದು ಬದಿಗೆ ವಾಲಿದೆ.

ಈ ಅನಿರೀಕ್ಷಿತ ತಿರುವಿನ ರಭಸಕ್ಕೆ ಹಿಂಭಾಗದಲ್ಲಿ ಕುಳಿತಿದ್ದ ಬಸವರಾಜ್ ನೇರವಾಗಿ ರಸ್ತೆಯ ಮೇಲೆ ಬಿದ್ದಿದ್ದಾನೆ. ದುರದೃಷ್ಟವಶಾತ್, ಆಟೋದ ಪಕ್ಕದಲ್ಲೇ ಚಲಿಸುತ್ತಿದ್ದ ಸಾರಿಗೆ ಬಸ್ಸಿನ ಹಿಂಬದಿಯ ಚಕ್ರಗಳು ರಸ್ತೆಗೆ ಬಿದ್ದ ಬಸವರಾಜ್ನ ದೇಹದ ಮೇಲೆ ಹರಿದಿವೆ. ತೀವ್ರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಾಯಚೂರು ಸಂಚಾರಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಸವರಾಜ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಹಾಗೂ ಆಟೋ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಸದ್ಯ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. “ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ, ಸಾರಿಗೆ ಇಲಾಖೆಯು ಸೂಕ್ತ ಪರಿಹಾರ ನೀಡಬೇಕು ಮತ್ತು ಇಂತಹ ಅಪಘಾತಗಳಿಗೆ ಕಾರಣವಾಗುವ ಅಜಾಗರೂಕ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಮೃತನ ಪೋಷಕರು ಒತ್ತಾಯಿಸಿದ್ದಾರೆ.


