ನವದೆಹಲಿ: ರಾವಿ ನದಿಯಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಹೆಚ್ಚುವರಿ ನೀರನ್ನು ತಡೆಹಿಡಿಯಲು ಭಾರತ ಮಹತ್ವದ ಹೆಜ್ಜೆ ಇರಿಸಿದೆ. ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಶಹಪುರ್ ಕಂಡಿ ಅಣೆಕಟ್ಟು ಯೋಜನೆಯು ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದು ಕಾರ್ಯಾರಂಭ ಮಾಡಿದ ನಂತರ ಪಾಕಿಸ್ತಾನಕ್ಕೆ ಹರಿಯುವ ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಲಿದೆ. ಈ ಬೆಳವಣಿಗೆಯು ನೆರೆ ರಾಷ್ಟ್ರಕ್ಕೆ ನೀರಿನ ಅಭಾವದ ಭೀತಿಯನ್ನು ತಂದೊಡ್ಡಿದೆ.

ಜಮ್ಮು ಮತ್ತು ಕಾಶ್ಮೀರ ಸಚಿವ ಜಾವೇದ್ ಅಹ್ಮದ್ ರಾಣಾ ಅವರ ಪ್ರಕಾರ, ಈ ಅಣೆಕಟ್ಟಿನ ಕಾಮಗಾರಿಯು ಮಾರ್ಚ್ 31ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯಿಂದಾಗಿ ಸಿಂಧೂ ಜಲ ಒಪ್ಪಂದದ ಅನ್ವಯ ಭಾರತಕ್ಕೆ ಲಭ್ಯವಿರುವ ರಾವಿ ನದಿಯ ಪೂರ್ಣ ಪ್ರಮಾಣದ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇದುವರೆಗೆ ತಾಂತ್ರಿಕ ಕಾರಣಗಳಿಂದಾಗಿ ಭಾರತದ ಪಾಲಿನ ಹೆಚ್ಚುವರಿ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿತ್ತು.
ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ಜಮ್ಮು-ಕಾಶ್ಮೀರದ ಬರಪೀಡಿತ ಪ್ರದೇಶಗಳಾದ ಕಥುವಾ ಮತ್ತು ಸಾಂಬಾ ಜಿಲ್ಲೆಗಳ ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು. ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಯು ಪೂರ್ಣಗೊಂಡರೆ ಜಮ್ಮು-ಕಾಶ್ಮೀರದ ಸಾವಿರಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದ್ದು, ಸ್ಥಳೀಯ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ.


