ಜಿಲ್ಲೆಸುದ್ದಿ

ಗಂಡು ಮಗು ಅಸೆಗೆ ಜಾತ್ರೆಯಲ್ಲೇ ಕಿಡ್ನಾಪ್ ; ಶಿರಾ ಪೊಲೀಸರ ಸಿನಿಮೀಯ ಕಾರ್ಯಾಚರಣೆಗೆ

ತುಮಕೂರು: ಶಿರಾ ತಾಲೂಕಿನ ಮಾಗೋಡು ಗ್ರಾಮದ ಶ್ರೀರಂಗ ಜಾತ್ರೆಯಲ್ಲಿ ನಡೆದ ಎರಡೂವರೆ ವರ್ಷದ ಗಂಡು ಮಗುವಿನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಪೊಲೀಸರು ಮಗುವನ್ನು ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಇಂದಿನ ಆಧುನಿಕ ಯುಗದಲ್ಲೂ ಗಂಡು ಮಗುವಿನ ಮೇಲಿನ ದುರಾಸೆಯಿಂದ ಮಹಿಳೆಯೊಬ್ಬಳು ಈ ಕೃತ್ಯ ಎಸಗಿರುವುದು ಸಮಾಜದ ಆಲೋಚನಾ ಲಹರಿಯನ್ನು ಪ್ರಶ್ನಿಸುವಂತಿದೆ. ಬೆಂಗಳೂರಿನ ಲಗ್ಗೆರೆ ನಿವಾಸಿಗಳಾದ ದಂಪತಿಯ ಮಗುವನ್ನು ತಾತ ಜಾತ್ರೆಗೆ ಕರೆತಂದಿದ್ದ ವೇಳೆ, ಚಾಕಲೇಟ್ ಕೊಡಿಸುವ ನೆಪದಲ್ಲಿ ಆರೋಪಿಗಳು ಅಪಹರಿಸಿದ್ದರು. ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ತಕ್ಷಣ ಎಚ್ಚೆತ್ತ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು.

ಶಿರಾ ಡಿವೈಎಸ್‌ಪಿ ಶೇಖರ್ ನೇತೃತ್ವದ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ತೀವ್ರ ಶೋಧ ನಡೆಸಿತು. ಅಂತಿಮವಾಗಿ ಬೆಂಗಳೂರಿನ ಕೊರಮಂಗಲದಲ್ಲಿರುವ ಶಾಂತಮೇರಿ ಎಂಬ ಮಹಿಳೆಯ ಮನೆಯಲ್ಲಿ ಮಗು ಪತ್ತೆಯಾಗಿದೆ. ಬಂಧಿತ ಮಹಿಳೆಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರೂ, ಗಂಡು ಮಗು ಬೇಕೆಂಬ ಹಂಬಲದಿಂದ ತನ್ನ ಸಂಬಂಧಿ ನರಸಯ್ಯನೊಂದಿಗೆ ಸೇರಿ ಈ ಅಪಹರಣ ಸಂಚು ರೂಪಿಸಿದ್ದಳು ಎಂಬ ಆಘಾತಕಾರಿ ಸತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಕಳೆದುಹೋಗಿದ್ದ ಮಗು ಮರಳಿ ಸಿಕ್ಕಿದ್ದರಿಂದ ಪೋಷಕರ ಆತಂಕ ದೂರವಾಗಿದ್ದು, ಪೊಲೀಸರ ಚಾಣಾಕ್ಷತನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Comments (0)

Your email address will not be published. Required fields are marked *

Back to top button