
ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಪ್ರೀತಿಸಿದ ಯುವತಿ ಕೈಕೊಟ್ಟ ಹಿನ್ನೆಲೆ ಕಿರಣ್ (26) ಎಂಬ ಯುವ ಬಾಡಿ ಬಿಲ್ಡರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಗಾಢವಾಗಿ ಪ್ರೀತಿಸುತ್ತಿದ್ದ ಕಿರಣ್, ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇ ದಿನದಂದು ಪ್ರೇಯಸಿಗೆ ವಿಶೇಷ ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಂಡಿದ್ದ ಇವರಿಗೆ, ಆಕೆಯ ಮದುವೆ ಬೇರೆಯವರೊಂದಿಗೆ ನಿಶ್ಚಯವಾಗಿರುವ ಸುದ್ದಿ ಕೇಳಿ ಆಘಾತವಾಗಿದೆ.

ತನ್ನ ಮದುವೆಯ ಆಮಂತ್ರಣ ಪತ್ರಿಕೆ ಮತ್ತು ಹೊಸ ಸೀರೆಯನ್ನು ತೋರಿಸಿದ ಪ್ರೇಯಸಿಯ ನಡೆ ಕಿರಣ್ ಅವರಿಗೆ ತೀವ್ರ ಬೇಸರ ಉಂಟು ಮಾಡಿದೆ . ಇದರಿಂದ ಮನನೊಂದ ಕಿರಣ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಮನೆಯವರು ಬಾಗಿಲು ತೆರೆದಾಗ ಈ ದಾರುಣ ದೃಶ್ಯ ಬೆಳಕಿಗೆ ಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಕಿರಣ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಸಾವಿಗೆ ಪ್ರೇಯಸಿ ಮತ್ತು ಆಕೆಯ ತಾಯಿಯೇ ನೇರ ಕಾರಣ ಎಂದು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಪೊಲೀಸರಿಗೆ ತನಿಖೆಗೆ ಸುಲಭವಾಗಲಿ ಎಂಬ ಉದ್ದೇಶದಿಂದ ತನ್ನ ಮೊಬೈಲ್ ಫೋನ್ ಪಾಸ್‌ವರ್ಡ್ ಅನ್ನು ಕೂಡ ಪತ್ರದಲ್ಲಿ ಬರೆದಿದ್ದಾರೆ. ಸದೃಢ ಮೈಕಟ್ಟು ಹೊಂದಿದ್ದ ಕ್ರೀಡಾಪಟುವೊಬ್ಬ ಪ್ರೀತಿ ವಿಫಲವಾದ ಕಾರಣಕ್ಕೆ ಈ ರೀತಿ ದುಡುಕಿನ ನಿರ್ಧಾರ ಕೈಗೊಂಡಿರುವುದು ಅವರ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.




