
ತೆಲಂಗಾಣ: ಕಾಮರೆಡ್ಡಿ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ವಿಧಿಯ ಆಟಕ್ಕೆ ಒಂದು ಸುಂದರ ಕುಟುಂಬ ಅಕ್ಷರಶಃ ನಲುಗಿಹೋಗಿದೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ಅವಳಿ ಸಹೋದರಿಯರನ್ನು ವಿವಾಹವಾಗಿದ್ದ ಅವಳಿ ಸಹೋದರರ ಪೈಕಿ ಓರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆಯಾಗಿ ಕೇವಲ ಒಂದು ತಿಂಗಳು ಕಳೆಯುವ ಮೊದಲೇ ಸಂಭವಿಸಿದ ಈ ಸಾವಿನಿಂದಾಗಿ ಎರಡೂ ಕುಟುಂಬಗಳಲ್ಲಿ ಕಣ್ಣೀರಿನ ಛಾಯೆ ಆವರಿಸಿದೆ.
ಮಾಚರೆಡ್ಡಿ ಮಂಡಲದ ಘನಪುರ ಗ್ರಾಮದ ವಿನಯ್ ಕುಮಾರ್ (31) ಮತ್ತು ವಿಜಯ್ ಕುಮಾರ್ ಎಂಬ ಅವಳಿ ಸಹೋದರರು ಕಳೆದ ಫೆಬ್ರವರಿ 22 ರಂದು ಕೀರ್ತಿ ಹಾಗೂ ಕೀರ್ತನಾ ಎಂಬ ಅವಳಿ ಸಹೋದರಿಯರನ್ನು ವರಿಸಿದ್ದರು. ವಿನಯ್ ಕುಮಾರ್ ಹೈದರಾಬಾದ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ವೃತ್ತಿ ಮಾಡುತ್ತಿದ್ದರು. ಯುಗಾದಿ ಹಬ್ಬದ ಸಂಭ್ರಮದ ನಡುವೆಯೇ ಮನೆಯಿಂದ ಹೊರಹೋದ ವಿನಯ್ ಕುಮಾರ್ ಮತ್ತೆ ಮನೆಗೆ ಮರಳಿರಲಿಲ್ಲ. ಆತನಿಗಾಗಿ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಸಿರಿಸಿಲ್ಲಾ ಜಿಲ್ಲೆಯ ಗಂಭೀರೋಪೇಟೆ ಮಂಡಲದ ನರ್ಮಲಾದ ಮನೇರು ಹೊಳೆಯಲ್ಲಿ ಶವವೊಂದು ಪತ್ತೆಯಾಗಿದ್ದು, ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.
ಪೊಲೀಸ್ ತನಿಖೆಯ ವೇಳೆ ಅದು ನಾಪತ್ತೆಯಾಗಿದ್ದ ವಿನಯ್ ಕುಮಾರ್ ಅವರದ್ದೇ ಶವ ಎಂದು ದೃಢಪಟ್ಟಿದೆ. ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರು ಮತ್ತು ಹೊಸ ಜೀವನದ ಕನಸು ಕಾಣುತ್ತಿದ್ದ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ವಿನಯ್ ಕುಮಾರ್ ಅವರ ಈ ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.




