ಜಿಲ್ಲೆರಾಜಕೀಯರಾಜ್ಯಸುದ್ದಿ

ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್; ಆಯೋಗದಿಂದ ವರದಿ,ನಕಲಿ ಪತ್ರಕರ್ತರು ಅರೆಸ್ಟ್!

ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದ ಗಂಭೀರ ಪ್ರಕರಣವು ಈಗ ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿದೆ. ಸರ್ಕಾರಿ ಅಧಿಕಾರಿಯ ಮನೆಯ ಕೊಠಡಿಯಲ್ಲೇ ರಹಸ್ಯ ಕ್ಯಾಮರಾ ಅಳವಡಿಸಿ, ಅವರ ಖಾಸಗಿ ಜೀವನದ ದೃಶ್ಯಗಳನ್ನು ಸೆರೆಹಿಡಿದು 50 ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಈ ಘಟನೆಯನ್ನು ಆಯೋಗವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಬೆಳಗಾವಿ ಎಸ್‌ಪಿಯವರಿಗೆ ಅಧಿಕೃತ ಪತ್ರ ಬರೆದಿದ್ದು, ಪ್ರಕರಣದ ಸಮಗ್ರ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಇವರು ನಕಲಿ ಪತ್ರಕರ್ತರ ಸೋಗಿನಲ್ಲಿ ಈ ನೀಚ ಕೃತ್ಯ ಎಸಗಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಅಧಿಕಾರಿಗಳನ್ನು ಬೆದರಿಸಿ ದೊಡ್ಡ ಮೊತ್ತದ ಹಣ ವಸೂಲಿ ಮಾಡುವ ಸಂಚು ರೂಪಿಸಿದ್ದ ಈ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಯೋಗವು ಸೂಚನೆ ನೀಡಿದೆ. ನಿಯಮಾನುಸಾರ ಪ್ರಕರಣವನ್ನು ಪರಿಶೀಲಿಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.

ಮಹಿಳಾ ಅಧಿಕಾರಿಯೊಬ್ಬರ ಗೌರವಕ್ಕೆ ಧಕ್ಕೆ ತಂದಿರುವ ಈ ಘಟನೆಯು ಆಡಳಿತ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ನಕಲಿ ಪತ್ರಕರ್ತರ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಸೈಬರ್ ಅಪರಾಧ ಮತ್ತು ವೈಯಕ್ತಿಕ ಗೌಪ್ಯತೆಯ ಉಲ್ಲಂಘನೆಯನ್ನು ತಡೆಗಟ್ಟಲು ಮಹಿಳಾ ಆಯೋಗವು ಈಗ ಸಕ್ರಿಯವಾಗಿ ಕಣಕ್ಕಿಳಿದಿದೆ. ತನಿಖೆಯ ವರದಿ ಬಂದ ನಂತರ ಆಯೋಗವು ಮುಂದಿನ ಕಾನೂನು ಹಂತಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

Comments (0)

Your email address will not be published. Required fields are marked *

Back to top button