Top Newsದೇಶ/ವಿದೇಶಸುದ್ದಿ

ಐಟಿ ಇಲಾಖೆಯ ‘ಎಐ’ ಬಲೆಗೆ ಬಿದ್ದ ಬಿರಿಯಾನಿ ಕಿಂಗ್ಸ್; ದೇಶಾದ್ಯಂತ 70,000 ಕೋಟಿ ರೂ. ಟ್ಯಾಕ್ಸ್ ದೋಖಾ

ದೇಶದಾದ್ಯಂತ ಇರುವ ಪ್ರಮುಖ ರೆಸ್ಟೋರೆಂಟ್‌ಗಳು ಕೃತಕ ಬುದ್ಧಿಮತ್ತೆಯ ಕಣ್ಗಾವಲಿಗೆ ಸಿಲುಕಿದ್ದು, ಬರೋಬ್ಬರಿ 70,000 ಕೋಟಿ ರೂಪಾಯಿಗಳ ಬೃಹತ್ ತೆರಿಗೆ ವಂಚನೆ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ. ಹೈದರಾಬಾದ್‌ನ ಜನಪ್ರಿಯ ಬಿರಿಯಾನಿ ಹೋಟೆಲ್‌ಗಳಿಂದ ಆರಂಭವಾದ ಈ ತನಿಖೆ, ಈಗ ಇಡೀ ದೇಶದ ರೆಸ್ಟೋರೆಂಟ್ ಉದ್ಯಮವನ್ನೇ ಬೆಚ್ಚಿಬೀಳಿಸಿದೆ. ಕೇವಲ 60 ಟೆರಾಬೈಟ್‌ಗಳಷ್ಟು ಡೇಟಾವನ್ನು ಪರಿಶೀಲಿಸುವ ಮೂಲಕ ಎಐ ತಂತ್ರಜ್ಞಾನವು ಈ ಸಂಕೀರ್ಣ ಜಾಲವನ್ನು ಬಯಲು ಮಾಡಿದೆ.

ಈ ವಂಚನೆಯ ಜಾಲವು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಅಹಮದಾಬಾದ್ ಮೂಲದ ಬಿಲ್ಲಿಂಗ್ ಸಾಫ್ಟ್‌ವೇರ್ ಅನ್ನು ಬಳಸುತ್ತಿದ್ದ ಈ ರೆಸ್ಟೋರೆಂಟ್‌ಗಳು, ಗ್ರಾಹಕರಿಂದ ಜಿಎಸ್‌ಟಿ ಸಹಿತ ಹಣ ಪಡೆದ ನಂತರ ಆ ಬಿಲ್‌ಗಳನ್ನು ಸಿಸ್ಟಮ್‌ನಿಂದಲೇ ಅಳಿಸಿ ಹಾಕುತ್ತಿದ್ದವು. ಹೀಗೆ ಡಿಲೀಟ್ ಮಾಡಲಾದ ಬಿಲ್‌ಗಳ ಮೂಲಕ ಬಂದ ನಗದು ಆದಾಯವನ್ನು ಮರೆಮಾಚಿ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಕಡಿಮೆ ಲಾಭವನ್ನು ತೋರಿಸಲಾಗುತ್ತಿತ್ತು. ವಿಧಿವಿಜ್ಞಾನ ಇಲಾಖೆಯ ಸಹಾಯದಿಂದ ಮರುಪಡೆದ ಸುಮಾರು 2.43 ಲಕ್ಷ ಬಿಲ್‌ಗಳನ್ನು ಎಐ ವಿಶ್ಲೇಷಿಸಿದಾಗ, ರೆಸ್ಟೋರೆಂಟ್‌ಗಳು ನಡೆಸುತ್ತಿದ್ದ ಈ ಕುತಂತ್ರ ಬೆಳಕಿಗೆ ಬಂದಿದೆ.

ರಾಜ್ಯವಾರು ಅಂಕಿಅಂಶಗಳ ಪ್ರಕಾರ, ಕರ್ನಾಟಕವು ಈ ಅಕ್ರಮದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದ ರೆಸ್ಟೋರೆಂಟ್‌ಗಳು ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಬಿಲ್‌ಗಳನ್ನು ಡಿಲೀಟ್ ಮಾಡುವ ಮೂಲಕ ತೆರಿಗೆ ವಂಚಿಸಿವೆ. ನಂತರದ ಸ್ಥಾನಗಳಲ್ಲಿ ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿವೆ. ಗ್ರಾಹಕರಿಂದ ಯುಪಿಐ ಅಥವಾ ನಗದಿನ ಮೂಲಕ ಹಣ ಪಡೆದು, ನಂತರ ದಾಖಲೆಗಳನ್ನೇ ನಾಪತ್ತೆ ಮಾಡುತ್ತಿದ್ದ ಮಾಲೀಕರಿಗೆ ಈಗ ಐಟಿ ಇಲಾಖೆ ಬಿಸಿ ಮುಟ್ಟಿಸಿದೆ.

Comments (0)

Your email address will not be published. Required fields are marked *

Back to top button