ಹುಬ್ಬಳ್ಳಿ : ನೀರಾವರಿಗೆ ಅನುದಾನ ಕೊರತೆ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಅವರು, ಕೃಷ್ಣಾ ಮೇಲ್ದಂಡೆ ಹಂತ 3 ರ ಕಾಮಗಾರಿಗೆ 5000 ಕೋಟಿ ರೂ. ಬಿಡುಗಡೆ ಮಾಡಬೇಕು. ನಾವು 52 ಸಾವಿರ ಕೋಟಿ ರೂ ಯೋಜನೆಗೆ ಅನುಮೋದನೆ ಕೊಟ್ಟಿದ್ದೇವೆ. ಭೂಪರಿಹಾರ ಮತ್ತು ಆರ್ ಆಂಡ್ ಆರ್ ಗೆ ಹಣ ಬಿಡುಗಡೆ ಮಾಡಬೇಕು. ಸುಮ್ಮನೆ ಕೋರ್ಟ್ ನೆಪ ಹೇಳುತ್ತಾರೆ. ಕೋರ್ಟ್ ಗೂ ಹಣ ಬಿಡುಗಡೆಗೂ ಸಂಬಂಧ ಇಲ್ಲ. ಯಾವುದೇ ನೀರಾವರಿ ಯೋಜನೆ ಒಂದೇ ವರ್ಷದಲ್ಲಿ ಪೂರ್ಣಗೊಳ್ಳುವುದಿಲ್ಲ. ಮಲಪ್ರಭಾ ಯೋಜನೆ ನಲವತ್ತು ವರ್ಷದಿಂದ ನಡೆಯುತ್ತಿದೆ. ಇನ್ನೂ ರೋಣ ಭಾಗದಲ್ಲಿ ಮುಂದುವರೆಯುತ್ತಿದೆ. ಅವರ ಕಾಲದಲ್ಲಿ ತುಂಗಭದ್ರಾ ಯೋಜನೆ ಆರಂಭವಾಗಿತ್ತು. ಅದನ್ನು ನಾವು ಪೂರ್ಣಗೊಳಿಸಿದ್ದೇವೆ. ಈ ಸರ್ಕಾರ ಬಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಸರ್ಕಾರ ಬಂದ ಮೇಲೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಇನ್ನು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಬಂದಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಕೇವಲ ರಾಜಕೀಯ ನಾವು ರಾಜ್ಯಕ್ಕೆ ಏನು ಅನುದಾನ ಕೊಡಬೇಕು ಅದನ್ನು ಕೊಟ್ಟಾಗಿದೆ. ಆದರೆ, ಕೇವಲ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತಿದ್ದಾರೆ. ಕೇಂದ್ರ ಸರಕಾರದಿಂದ ನೇರವಾಗಿ ಆಯಾ ಇಲಾಖೆಗೆ ಅನುದಾನ ಹೋಗುತ್ತಿದೆ. ಇನ್ನು ಬರಗಾಲ ಕಾಮಗಾರಿ ಸೇರಿದಂತೆ ಯಾವುದೇ ಪರಿಹಾರಕ್ಕೆ ಕೇಂದ್ರ ಸರ್ಕಾರ ಅನುದಾನ ಕೊಡುತ್ತಿಲ್ಲ ಅಂತಾ ಕೇಂದ್ರ ಸರ್ಕಾರದ ಮೇಲೆ ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ ಎಂದರು.
ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂದು ಅವರು ದಾಖಲೆ ಬಿಡುಗಡೆ ಮಾಡಲಿ, ನಾವು ದಾಖಲೆ ಬಿಡುಗಡೆ ಮಾಡುತ್ತೇವೆ. ಕೇಂದ್ರದ ನಿಯಮಗಳು ಈಗ ಬದಲಾಗಿವೆ. ನೇರವಾಗಿ ಜಿಲ್ಲೆಗಳಿಗೆ ಹಣ ಹೋಗುತ್ತದೆ. ಸರ್ಕಾರಕ್ಕೆ ಹಣ ಕಳುಹಿಸಿದರೆ ಖರ್ಚು ಮಾಡುತ್ತಿಲ್ಲ ಎಂದು ಜಿಲ್ಲೆಗಳಿಗೆ ಆಯಾ ಯೋಜನೆಗಳಿಗೆ ಹೋಗುತ್ತಿದೆ. ರಾಜ್ಯ ಸರ್ಕಾರ ಅದನ್ನು ಹೇಳುವುದಿಲ್ಲ ಎಂದರು. ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗೃಹಲಕ್ಷ್ಮೀ ಯೋಜನೆ ಶೇ 35% ರಷ್ಟು ನಿಜವಾದ ಫಲಾನುಭವಿಗಳಿಗೆ ತಲುಪಿಲ್ಲ. ಸುಮ್ಮನೆ ತಂತ್ರಾಂಶದ ನೆಪ ಹೇಳುತ್ತಾರೆ. ಬರ ಪರಿಹಾರದ ವಿಚಾರದಲ್ಲಿಯೂ ರೈತರು ಫ್ರೂಟ್ಸ್ ನಲ್ಲಿ ದಾಖಲೆ ಸಲ್ಲಿಸದಿದ್ದರೆ ಡಿಸಿಗಳು ಹೊಣೆ ಎಂದು ಹೇಳುತ್ತಾರೆ. ಅದು ಕೃಷಿ ಇಲಾಖೆಯವರ ಜವಾಬ್ದಾರಿ ಎಂದರು.
ಕೇಂದ್ರದಿಂದ ಅನುದಾನ ತರಲು ಪ್ರಯತ್ನ
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವುದು ಒಳ್ಳೆಯ ಬೆಳವಣಿಗೆ ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಪಡೆಯಲು ನಾವೂ ಪ್ರಯತ್ನ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಮುಕ್ತವಾಗಿದ್ದಾರೆ ಎಂದರು.