bengaluruಜಿಲ್ಲೆ

ಬೆಂಗಳೂರು ಕರಗ 2026; ಮೈಸೂರು ದಸರಾ ಶೈಲಿಯಲ್ಲಿ ಅದ್ಧೂರಿ ಶಕ್ತ್ಯೋತ್ಸವ!

ಬೆಂಗಳೂರು : ಐತಿಹಾಸಿಕ ಮತ್ತು ಸಾಂಸ್ಕೃತಿಕ ಹೆಮ್ಮೆಯಾದ ಕರಗ ಶಕ್ತ್ಯೋತ್ಸವವು ಈ ಬಾರಿ ಮೈಸೂರು ದಸರಾ ಮಾದರಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಲಿದ್ದು, ನಗರದಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ.

ಮಾರ್ಚ್ 24ರಂದು ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಈ ಪವಿತ್ರ ಉತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಏಪ್ರಿಲ್ 1ರಂದು ಜಗತ್ಪ್ರಸಿದ್ಧ ಮುಖ್ಯ ಕರಗ ಮಹೋತ್ಸವ ನಡೆಯಲಿದೆ. ಸಿಟಿ ಮಾರ್ಕೆಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಕ್ತಾದಿಗಳಿಗೆ ವಿಶೇಷ ದೃಶ್ಯ ವೈಭವವನ್ನು ಒದಗಿಸಲು ಸಕಲ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.

ಈ ಬಾರಿಯ ವಿಶೇಷವೆಂದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮೈಸೂರು ದಸರಾವನ್ನು ನೆನಪಿಸುವಂತೆ ನಗರದ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಮಾಡಲು ಮುಂದಾಗಿದೆ. ಸುಮಾರು 39 ಲಕ್ಷ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಧರ್ಮರಾಯಸ್ವಾಮಿ ದೇವಾಲಯ, ಐತಿಹಾಸಿಕ ಸಂಪಂಗಿ ಕೆರೆ ಮತ್ತು ಕರಗ ಸಾಗುವ ಸಂಪ್ರದಾಯಬದ್ಧ ಮಾರ್ಗಗಳು ವಿದ್ಯುತ್ ದೀಪಗಳಿಂದ ಝಗಮಗಿಸಲಿವೆ.

ಅಲಂಕಾರದ ಯೋಜನೆಯನ್ನು ಎರಡು ಹಂತಗಳಲ್ಲಿ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ ದೇವಾಲಯ ಮತ್ತು ಕೆರೆಯ ಆವರಣಕ್ಕೆ 10.14 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಜಿಬಿಎ ಪ್ರಧಾನ ಕಚೇರಿ ಹಾಗೂ ನಗರದ ಪ್ರಮುಖ ವೃತ್ತಗಳಿಗೆ 28.92 ಲಕ್ಷ ರೂಪಾಯಿ ವೆಚ್ಚದಲ್ಲಿ ಅಲಂಕಾರ ಮಾಡಲಾಗುವುದು. ಕೇವಲ ದೀಪಾಲಂಕಾರಕ್ಕಾಗಿಯೇ ಇಷ್ಟು ದೊಡ್ಡ ಮೊತ್ತವನ್ನು ಮೀಸಲಿಟ್ಟಿರುವುದು ಈ ಬಾರಿಯ ಕರಗ ಉತ್ಸವದ ಭವ್ಯತೆಗೆ ಸಾಕ್ಷಿಯಾಗಿದೆ.

ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಮಾರ್ಚ್ 30ರಂದು ಹಸಿ ಕರಗ ನೆರವೇರಲಿದ್ದು, ಏಪ್ರಿಲ್ 1ರ ಮಧ್ಯರಾತ್ರಿ ಶಕ್ತಿದೇವತೆಯ ಆರಾಧನೆಯ ಮುಖ್ಯ ಕರಗ ಹೊರಡಲಿದೆ. ಈ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಕರಗದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ಬೆಂಗಳೂರು ನಗರವು ಹಬ್ಬದ ಕಳೆ ಕಟ್ಟಲಿದೆ.

Comments (0)

Your email address will not be published. Required fields are marked *

Back to top button