Top Newsಜಿಲ್ಲೆರಾಜ್ಯಸುದ್ದಿ

ಬಾಗಲಕೋಟೆ ಶಾಂತಿ ಸಭೆ ವಿಫಲ; ಹಿಂದೂ ಮುಖಂಡರ ಗೈರು

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಸಂಭವಿಸಿದ ಕಲ್ಲು ತೂರಾಟದ ನಂತರ ನಗರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಎರಡನೇ ಹಂತದ ಶಾಂತಿ ಸಭೆಯು ವಿಫಲಗೊಂಡಿದೆ. ನವನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಎಸ್ಪಿ ಸಿದ್ದಾರ್ಥ ಗೋಯಲ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಗೆ ಹಿಂದೂ ಸಮುದಾಯದ ಮುಖಂಡರು ಗೈರುಹಾಜರಾಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಕೇವಲ ಮುಸ್ಲಿಂ ಸಮುದಾಯದ ಮುಖಂಡರು ಮಾತ್ರ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಘಟನೆಯಲ್ಲಿ ಕಲ್ಲು ತೂರಾಟ ನಡೆಸಿದ ಮತ್ತು ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿದ ನೈಜ ಆರೋಪಿಗಳನ್ನು ವಿಳಂಬ ಮಾಡದೆ ಬಂಧಿಸಬೇಕು ಎಂದು ಆಗ್ರಹಿಸಿದರು. ಶಾಂತಿ ಮತ್ತು ಸೌಹಾರ್ದತೆಗೆ ತಮ್ಮ ಪೂರ್ಣ ಸಹಕಾರವಿದೆ ಎಂದು ಸ್ಪಷ್ಟಪಡಿಸಿದ ಮುಖಂಡರು, ನೈಜ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಭೆಯಿಂದ ನಿರ್ಗಮಿಸಿದರು.

ಜಿಲ್ಲಾಡಳಿತವು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಸತತ ಪ್ರಯತ್ನ ನಡೆಸುತ್ತಿದ್ದರೂ, ಹಿಂದೂ ಮುಖಂಡರು ಸಭೆಗೆ ಬಾರದಿರುವುದು ನಗರದಲ್ಲಿನ ಉದ್ವಿಗ್ನತೆ ಇನ್ನು ಸಂಪೂರ್ಣವಾಗಿ ಶಮನಗೊಂಡಿಲ್ಲ ಎಂಬುದನ್ನು ಸೂಚಿಸುತ್ತಿದೆ. ಎರಡೂ ಸಮುದಾಯದ ಪ್ರಮುಖರು ಒಟ್ಟಾಗಿ ಕುಳಿತು ಚರ್ಚಿಸದ ಹೊರತು ಶಾಂತಿ ಸ್ಥಾಪನೆ ಸವಾಲಾಗಿಯೇ ಉಳಿಯುವ ಸಾಧ್ಯತೆಯಿದೆ. ಸದ್ಯಕ್ಕೆ ಜಿಲ್ಲಾಡಳಿತವು ಮುಂದಿನ ಹಂತವಾಗಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

Comments (0)

Your email address will not be published. Required fields are marked *

Back to top button