ಜಿಲ್ಲೆಸುದ್ದಿ

ಕಾಡಾನೆಯ ಕಾದಾಟಕ್ಕೆ ಹೆದರಿ ಕಾಡು ಸೇರಿದ ಸಾಕಾನೆ ಜ್ಯೂನಿಯರ್ ಅರ್ಜುನ!

ಚಿಕ್ಕಮಗಳೂರು: ಪುರ ಗ್ರಾಮದಲ್ಲಿ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ, ಮದವೇರಿದ ಕಾಡಾನೆಯ ಆರ್ಭಟಕ್ಕೆ ಹೆದರಿ ಸಾಕಾನೆ ಜ್ಯೂನಿಯರ್ ಅರ್ಜುನ ಕಾಡು ಸೇರಿದ ಘಟನೆ ಆತಂಕ ಮೂಡಿಸಿತ್ತು. ಫೆಬ್ರವರಿ 16 ರಂದು ಯಲ್ಲಪ್ಪ ಎಂಬ ಕಾರ್ಮಿಕನನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಸೆರೆಹಿಡಿಯಲು ಸರ್ಕಾರ ಆದೇಶಿಸಿದ ಬೆನ್ನಲ್ಲೇ, ಅರಣ್ಯ ಇಲಾಖೆಯು ಏಳು ಕುಮ್ಕಿ ಆನೆಗಳೊಂದಿಗೆ ಬೃಹತ್ ಕಾರ್ಯಾಚರಣೆ ಆರಂಭಿಸಿತ್ತು. ಈ ತಂಡದ ಭಾಗವಾಗಿದ್ದ ಜ್ಯೂನಿಯರ್ ಅರ್ಜುನ, ಕಾಡಾನೆಯೊಂದಿಗಿನ ಕಾದಾಟದ ಸಂದರ್ಭದಲ್ಲಿ ಭಯಗೊಂಡು ಮಾವುತನ ಮಾತು ಮೀರಿ ದಟ್ಟಾರಣ್ಯದೊಳಗೆ ಓಡಿಹೋಗಿದ್ದನು.

ಸುಮಾರು ಒಂದು ಗಂಟೆಗಳ ಕಾಲ ಸಾಕಾನೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ಶೋಧ ನಡೆಸಿದರು. ಕಾರ್ಯಾಚರಣೆಯ ಮಧ್ಯೆಯೇ ಸಾಕಾನೆ ನಾಪತ್ತೆಯಾದದ್ದು ಅಧಿಕಾರಿಗಳನ್ನು ಹೈರಾಣಾಗಿಸಿತ್ತು. ಅಂತಿಮವಾಗಿ ಒಂದು ಗಂಟೆಯ ಸತತ ಹುಡುಕಾಟದ ನಂತರ ಜ್ಯೂನಿಯರ್ ಅರ್ಜುನ ಸುರಕ್ಷಿತವಾಗಿ ಪತ್ತೆಯಾಗಿದ್ದು, ಇಲಾಖೆಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಗುಂಪಿನಲ್ಲಿರುವ ಮೂರು ಕಾಡಾನೆಗಳ ಪೈಕಿ ಒಂದನ್ನು ಸೆರೆಹಿಡಿದು, ಉಳಿದವುಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಪ್ರಕ್ರಿಯೆ ಮುಂದುವರಿದಿದೆ.

ಬಾಳೆಹೊನ್ನೂರು ಅರಣ್ಯ ಇಲಾಖೆ ಕಚೇರಿ ಮುಂದೆ ಗ್ರಾಮಸ್ಥರು ನಡೆಸಿದ್ದ ತೀವ್ರ ಪ್ರತಿಭಟನೆಯ ನಂತರ ಈ ಕಾರ್ಯಾಚರಣೆ ಚುರುಕುಗೊಂಡಿದೆ. ಮದವೇರಿದ ಕಾಡಾನೆಗಳ ಹಾವಳಿಯಿಂದಾಗಿ ಮಲೆನಾಡು ಭಾಗದಲ್ಲಿ ಆತಂಕ ಮನೆಮಾಡಿದ್ದು, ಸಾಕಾನೆಗಳು ಸಹ ಕಾಡಾನೆಗಳ ಅಬ್ಬರಕ್ಕೆ ಬೆದರುತ್ತಿರುವುದು ಕಾರ್ಯಾಚರಣೆಯ ಸವಾಲನ್ನು ಹೆಚ್ಚಿಸಿದೆ.

Comments (0)

Your email address will not be published. Required fields are marked *

Back to top button