ದೇಶ/ವಿದೇಶಸುದ್ದಿ

ಭಾರತ್ ಮಂಟಪಂನಲ್ಲಿ ಎಐ ಕ್ರಾಂತಿ;ಎಐ ಲೋಕದಲ್ಲಿ ‘ಭಾರತ್ ಜೆನ್’ ಅಧಿಪತ್ಯ

ದೆಹಲಿ : ಭಾರತ್ ಮಂಟಪಂನಲ್ಲಿ ಫೆಬ್ರುವರಿ 16ರಿಂದ 20ರವರೆಗೆ ಆಯೋಜಿಸಲಾಗಿರುವ ಎಐ ಇಂಪ್ಯಾಕ್ಟ್ ಸಮಿಟ್ ಭಾರತದ ಭವಿಷ್ಯದ ತಾಂತ್ರಿಕ ದಿಕ್ಕನ್ನು ಜಗತ್ತಿಗೆ ತೋರಿಸುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ನೂರಾರು ಎಐ ಫೌಂಡೇಶನಲ್ ಮಾಡಲ್‌ಗಳು, ರೋಬೋಟಿಕ್ಸ್ ಮತ್ತು ಡೇಟಾ ಸೆಂಟರ್‌ಗಳು ಇಲ್ಲಿ ಗಮನ ಸೆಳೆಯುತ್ತಿವೆ. ಮುಖ್ಯವಾಗಿ ಭಾರತ್ ಜೆನ್ ಸಂಸ್ಥೆಯು 22 ಭಾರತೀಯ ಭಾಷೆಗಳನ್ನು ಬೆಂಬಲಿಸುವ 17 ಬಿಲಿಯನ್ ಪ್ಯಾರಾಮೀಟರ್‌ನ ‘ಪರಮ್ 27ಬಿ’ ಎಂಬ ಮಲ್ಟಿಲಿಂಗ್ವಲ್ ಮಾಡಲ್ ಅನ್ನು ಅನಾವರಣಗೊಳಿಸಿದ್ದು, ಇದು ಆರೋಗ್ಯ ಮತ್ತು ಫಿನ್‌ಟೆಕ್ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆ ತರಲಿದೆ.

ತಂತ್ರಜ್ಞಾನದ ಜೊತೆಗೆ ಡೇಟಾ ಸುರಕ್ಷತೆಗೂ ಭಾರತ ಒತ್ತು ನೀಡುತ್ತಿದ್ದು, ಪ್ಯಾರಾಡಿಗಮ್‌ ಐಟಿ ಕಂಪನಿಯ ‘ಸೋವರಿನ್ ಎಐ ಬಾಕ್ಸ್’ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಸಂಪೂರ್ಣ ದೇಶೀಯವಾಗಿ ನಿರ್ಮಿತವಾಗಿದ್ದು, ಭಾರತದ ಸೂಕ್ಷ್ಮ ದತ್ತಾಂಶಗಳು ದೇಶದ ಗಡಿಯೊಳಗೆ ಇರುವಂತೆ ನೋಡಿಕೊಳ್ಳುತ್ತದೆ. ಇನ್ನು ವಾಣಿಜ್ಯ ಕ್ಷೇತ್ರದಲ್ಲಿ ಸ್ಕೈ ಏರ್, ಅರೈವ್ ಎಐ ಮತ್ತು ಆಟ್ಟೋನಮಿ ಕಂಪನಿಗಳು ಸೇರಿ ವಿಶ್ವದ ಮೊದಲ ಎಂಡ್-ಟು-ಎಂಡ್ ಅಟೊನಾಮಸ್ ಕಾಮರ್ಸ್ ಡೆಲಿವರಿ ಸಿಸ್ಟಂ ಅನ್ನು ಪರಿಚಯಿಸಿವೆ. ಈಗಾಗಲೇ 36 ಲಕ್ಷಕ್ಕೂ ಹೆಚ್ಚು ಯಶಸ್ವಿ ಡೋರ್ ಡೆಲಿವರಿಗಳ ಪರೀಕ್ಷೆ ನಡೆಸಿರುವುದು ಭಾರತದ ಸಾಧನೆಗೆ ಸಾಕ್ಷಿಯಾಗಿದೆ.

ಶಿಕ್ಷಣ ಮತ್ತು ಸಂಸ್ಕೃತಿಯಲ್ಲೂ ಎಐ ಪ್ರಭಾವ ಹೆಚ್ಚುತ್ತಿದ್ದು, ವಿಶನ್ ಡಿಜಿಟಲ್ ಇಂಡಿಯಾದಿಂದ ಭಾರತದ ಮೊದಲ ‘ಎಐ ಟ್ರೈನರ್ ಮೆಷೀನ್’ ಅನಾವರಣಗೊಂಡಿದೆ. ಇತ್ತ ಬೆಂಗಳೂರು ಮೂಲದ ‘ಸನಾತನ’ ಎಂಬ ಸ್ಟಾರ್ಟಪ್ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಎಐ ತಂತ್ರಜ್ಞಾನವನ್ನು ಬಳಸುತ್ತಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಇದರೊಂದಿಗೆ ಸರ್ವಮ್ ಎಐ, ರಿಲಾಯನ್ಸ್ ಜಿಯೋ ಮತ್ತು ಯುವ ವಿದ್ಯಾರ್ಥಿಗಳ ಸ್ಟಾರ್ಟಪ್ ಆದ ಡ್ರುಬ್ಲೆಟ್ ಇನ್ನೋವೇಶನ್ ಕೂಡ ತಮ್ಮ ರೋಬೋಟಿಕ್ಸ್ ತಂತ್ರಜ್ಞಾನಗಳ ಮೂಲಕ ಭವಿಷ್ಯದ ಭಾರತದ ಚಿತ್ರಣವನ್ನು ನೀಡುತ್ತಿವೆ.

ಇದೇ ಸಮಿಟ್‌ನಲ್ಲಿ ಗಲ್ಗೋಟಿಯಾ ಯೂನಿವರ್ಸಿಟಿಯು ಚೀನಾ ನಿರ್ಮಿತ ರೋಬೋಟ್ ಅನ್ನು ತನ್ನದೇ ಆವಿಷ್ಕಾರ ಎಂದು ಹೇಳಿಕೊಂಡು ವಿವಾದಕ್ಕೆ ಈಡಾಗಿರುವುದು ನಿಜವಾದರೂ, ಈ ಒಂದು ಪ್ರಮಾದದಿಂದ ಭಾರತದ ಅಗಾಧ ಸಾಧನೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೂರಾರು ಸ್ಟಾಲ್‌ಗಳಲ್ಲಿ ಪ್ರದರ್ಶನಗೊಂಡಿರುವ ಭಾರತೀಯರ ನೈಜ ಆವಿಷ್ಕಾರಗಳು ಮುಂಬರುವ ವರ್ಷಗಳಲ್ಲಿ ಎಐ ಲೋಕದಲ್ಲಿ ಭಾರತವು ವಿಶ್ವಗುರುವಾಗಲಿದೆ ಎನ್ನುವ ಭರವಸೆಯನ್ನು ಮೂಡಿಸಿವೆ.

Comments (0)

Your email address will not be published. Required fields are marked *

Back to top button