
ಮಧ್ಯಪ್ರಾಚ್ಯ ರಾಷ್ಟ್ರಗಳ ಸಂಘರ್ಷದ ಹಿನ್ನೆಲೆಯಲ್ಲಿ ಎಲ್‌ಪಿಜಿ ಅನಿಲದ ಕೊರತೆಯುಂಟಾಗಿ ಜೀವನೋಪಾಯಕ್ಕಾಗಿ ಪರದಾಡುತ್ತಿದ್ದ ಆಟೋ ಚಾಲಕರ ಸಂಕಷ್ಟಕ್ಕೆ ಹಿರಿಯ ನಟ ವಿನೋದ್ ರಾಜ್ ಅವರು ಸಾಂತ್ವನ ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ತಮ್ಮ ತಾಯಿ, ದಿವಂಗತ ಡಾ. ಲೀಲಾವತಿ ಅವರ ಸಮಾಧಿ ಬಳಿ ನೂರಾರು ಆಟೋ ಚಾಲಕರಿಗೆ ದಿನಸಿ ಕಿಟ್ ಹಾಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಅವರು ನೆರವಾಗಿದ್ದಾರೆ. ಅನಿಲದ ಕೊರತೆಯಿಂದಾಗಿ ದುಡಿಮೆ ಇಲ್ಲದೆ ಕಂಗೆಟ್ಟಿದ್ದ ಚಾಲಕರ ಸ್ಥಿತಿಯನ್ನು ಕಂಡು ಮಿಡಿದ ವಿನೋದ್ ರಾಜ್, ತಮ್ಮ ತಾಯಿಯ ಹೆಸರಿನಲ್ಲಿ ಈ ಸೇವಾ ಕಾರ್ಯವನ್ನು ಮಾಡುವ ಮೂಲಕ ಚಾಲಕರ ಕುಟುಂಬಗಳಿಗೆ ಆಸರೆಯಾಗಿದ್ದಾರೆ.
ಯಾವಾಗಲೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ವಿನೋದ್ ರಾಜ್ ಅವರ ಈ ನಡೆಗೆ ಆಟೋ ಚಾಲಕರು ಮತ್ತು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಂಕಷ್ಟದ ಸಮಯದಲ್ಲಿ ಯಾರೂ ಇಲ್ಲದವರಿಗೆ ತಾವಿದ್ದೇವೆ ಎಂಬ ಭರವಸೆ ನೀಡಿದ ನಟ, ಸರಳತೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆಹಾರ ಇಲಾಖೆಯು ರಾಜ್ಯದಲ್ಲಿ ಅನಿಲದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸಿದ ಶ್ರಮಿಕ ವರ್ಗಕ್ಕೆ ವಿನೋದ್ ರಾಜ್ ನೀಡಿದ ಈ ಸಹಾಯ ಹಸ್ತವು ದೊಡ್ಡ ಮಟ್ಟದ ನೆಮ್ಮದಿಯನ್ನು ತಂದಿದೆ.




