Top Newsಕ್ರೈಂ ಸ್ಟೋರಿದೇಶ/ವಿದೇಶಸುದ್ದಿ

ಐರ್ಲೆಂಡ್‌ನಲ್ಲಿ ಕರ್ನಾಟಕದ ಕಡಬದ ಯುವಕ ನಿಗೂಢ ಸಾವು!

ಐರ್ಲೆಂಡ್‌ : ಡಬ್ಲಿನ್‌ನಲ್ಲಿ ಕಡಬ ಮೂಲದ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಕೆನಡಾದಲ್ಲಿ ಕನ್ನಡಿಗ ಚಂದನ್ ಕುಮಾರ್ ಅವರ ಹತ್ಯೆಯ ಬೆನ್ನಲ್ಲೇ ಈ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ನಿವಾಸಿ ಸಾಂಜೋ ಸುನೀಲ್ (31) ಎಂಬುವವರು ಐರ್ಲೆಂಡ್‌ನ ಡಬ್ಲಿನ್‌ನ ಚಾರ್ಲ್ಸ್‌ಟೌನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತ್ನಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಸುನೀಲ್ ಅವರ ಮೃತದೇಹ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಸುನೀಲ್ ಮೊದಲು ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಅವರ ಪತ್ನಿ ಐರ್ಲೆಂಡ್‌ನಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾರಣ, ಕೆಲವೇ ತಿಂಗಳ ಹಿಂದೆ ಅವರೂ ಐರ್ಲೆಂಡ್‌ಗೆ ತೆರಳಿ ವಾಸವಾಗಿದ್ದರು. ಕೇವಲ ಒಂದು ವರ್ಷದ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸುನೀಲ್ ಅವರ ಈ ಸಾವು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.

ಇದು ಆತ್ಮಹತ್ಯೆಯೋ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ಐರ್ಲೆಂಡ್ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.ಕೆನಡಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಕನ್ನಡ ಪರ ಸಂಘಟನೆಯ ನೇತಾರರಾಗಿದ್ದ ನೆಲಮಂಗಲದ ಚಂದನ್ ಕುಮಾರ್ ಅವರ ಹತ್ಯೆ ಪ್ರಕರಣ ಇನ್ನೂ ಹಸಿರಾಗಿಯೇ ಇದೆ. ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದ ಚಂದನ್ ಅವರ ಅಂತ್ಯಕ್ರಿಯೆ ಇತ್ತೀಚೆಗಷ್ಟೇ ಅವರ ಹುಟ್ಟೂರಲ್ಲಿ ನಡೆದಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಸಾಲು ಸಾಲಾಗಿ ಇಂತಹ ದುರಂತಗಳಿಗೆ ಈಡಾಗುತ್ತಿರುವುದು ಅವರ ಕುಟುಂಬಸ್ಥರಲ್ಲಿ ಮತ್ತು ವಿದೇಶಾಂಗ ಇಲಾಖೆಯಲ್ಲಿ ಕಳವಳ ಮೂಡಿಸಿದೆ.

Comments (0)

Your email address will not be published. Required fields are marked *

Back to top button