ಕ್ರೈಂ ಸ್ಟೋರಿಸುದ್ದಿ

ಪ್ರೀತಿ ನಿರಾಕರಿಸಿದ ಯುವತಿ ಮನೆಗೆ ನುಗ್ಗಿ ಕೊಲೆ ಯತ್ನಿಸಿದ ಪಾಪಿ ಲವರ್

ಶಿವಮೊಗ್ಗ: ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕನೊಬ್ಬ ಯುವತಿಯ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಭೀಕರ ಘಟನೆ ತೀರ್ಥಹಳ್ಳಿ ತಾಲೂಕಿನ ತೂದೂರು ಗ್ರಾಮದಲ್ಲಿ ನಡೆದಿದೆ.

ತೂದೂರು ನಿವಾಸಿ ಸ್ವರೂಪ್ ಎಂಬಾತನೇ ಈ ಕೃತ್ಯ ಎಸಗಿದವನು. ಈತ ಕಳೆದ ಆರು ತಿಂಗಳಿಂದ ಅದೇ ಊರಿನ ಅಪೂರ್ವ ಎಂಬ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಆದರೆ ಅಪೂರ್ವ ಆತನ ಪ್ರೀತಿಯನ್ನು ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಸ್ವರೂಪ್, ಯುವತಿಗೆ ಕೊಲೆ ಮಾಡುವುದಾಗಿ ಈ ಮೊದಲೇ ಬೆದರಿಕೆ ಹಾಕಿದ್ದನು, ಸಂಜೆ ಕಂಠಪೂರ್ತಿ ಕುಡಿದು ಬಂದ ಸ್ವರೂಪ್, ನೇರವಾಗಿ ಅಪೂರ್ವ ಅವರ ಮನೆಗೆ ನುಗ್ಗಿದ್ದಾನೆ. ಅಡ್ಡ ಬಂದ ಅಪೂರ್ವ ತಾಯಿಯನ್ನು ಮನೆಯಿಂದ ಹೊರಕ್ಕೆ ತಳ್ಳಿ, ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ನಂತರ ತಾನು ತಂದಿದ್ದ ಬಿಯರ್ ಬಾಟಲಿಯನ್ನು ಒಡೆದು ಅಪೂರ್ವ ಅವರ ಕತ್ತು, ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಮನಬಂದಂತೆ ಚುಚ್ಚಿ ಗಾಯಗೊಳಿಸಿದ್ದಾನೆ.

ಮಗಳ ಚೀರಾಟ ಕೇಳಿ ತಂದೆ ಸುಧಾಕರ್ ಅವರು ಬಾಗಿಲು ಒಡೆದು ಒಳಗೆ ಬಂದಾಗ, ಆರೋಪಿ ಸ್ವರೂಪ್ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಪೂರ್ವ ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ನಡೆದ ಕೆಲವೇ ಸಮಯದಲ್ಲಿ ತೀರ್ಥಹಳ್ಳಿ ಪೊಲೀಸರು ಆರೋಪಿ ಸ್ವರೂಪ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

Comments (0)

Your email address will not be published. Required fields are marked *

Back to top button