ರಾಜ್ಯಸುದ್ದಿ

5 ದಿನದ ಮಗು ಬಿಟ್ಟು ಬಾರದ ಲೋಕಕ್ಕೆ ಪಯಣ

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಕೇವಲ ಐದು ದಿನದ ಹಸುಗೂಸನ್ನು ಅಗಲಿದ 22 ವರ್ಷದ ತಾಯಿ ವಾಸವಿ ಎಂಬಾಕೆ ಆಸ್ಪತ್ರೆಯ ಮಹಡಿಯಿಂದ ಬಿದ್ದು ದುರ್ಮರಣಕ್ಕೀಡಾಗಿದ್ದಾಳೆ. ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಮಗುವಿಗೆ ಹಾಲುಣಿಸಲು ಬಂದಿದ್ದ ಈಕೆ, ಇದ್ದಕ್ಕಿದ್ದಂತೆ ಮಹಡಿ ಏರಿ ಅಲ್ಲಿಂದ ಕೆಳಕ್ಕೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಭೀಕರವಾಗಿ ಸೆರೆಯಾಗಿದೆ. ಹಸುಗೂಸು ತಾಯಿಯ ಹಾಲಿಗಾಗಿ ಆಸ್ಪತ್ರೆಯಲ್ಲಿ ರೋದಿಸುತ್ತಿದ್ದರೆ, ಹೆತ್ತ ತಾಯಿ ಬಾರದ ಲೋಕಕ್ಕೆ ಪಯಣಿಸಿರುವುದು ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.

ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸ್ಥಳೀಯರಲ್ಲಿ ಬೇರೆದೇ ರೀತಿಯ ಚರ್ಚೆಗಳು ಶುರುವಾಗಿವೆ. ವಾಸವಿ ಮಹಡಿ ಹತ್ತುವ ರೀತಿ ಮತ್ತು ಆಕೆಯ ವರ್ತನೆಯನ್ನು ಕಂಡು ಕೆಲವರು ಇದೊಂದು ‘ದೆವ್ವದ ಕೃತ್ಯ’ ಅಥವಾ ‘ಭೂತದ ಭೀತಿ’ ಎಂದು ಕಥೆ ಕಟ್ಟುತ್ತಿದ್ದಾರೆ. ಈ ನಿಗೂಢ ಸಾವು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ನಡೆದ ಅಪಘಾತವೋ ಎಂಬ ಬಗ್ಗೆ ಸಾಕಷ್ಟು ವದಂತಿಗಳು ಹರಡುತ್ತಿವೆ. ಸದ್ಯ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ವೈಜ್ಞಾನಿಕವಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಜನಸಾಮಾನ್ಯರು ಇಂತಹ ಘಟನೆಗಳನ್ನು ಮೂಢನಂಬಿಕೆಯ ದೃಷ್ಟಿಯಿಂದ ನೋಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button