ತುಮಕೂರು: ಕೊರಟಗೆರೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ತುಂಡರಿಸಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲಕ್ಷ್ಮಿದೇವಮ್ಮ ಎಂಬ ಮಹಿಳೆಯನ್ನ ಅಳಿಯನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಅಳಿಯ ಡಾ. ರಾಮಚಂದ್ರ ತನ್ನ ಸ್ನೇಹಿತ ಸತೀಶ್ ಹಾಗೂ ಕಿರಣ್ ಜೊತೆ ಸೇರಿ ಹತ್ಯೆ ಮಾಡಿದ್ದಾನೆ. ಮೃತ ಲಕ್ಷ್ಮಿದೇವಮ್ಮ ಮಗಳನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುಲು ಒತ್ತಾಯಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಬೇಸತ್ತ ಅಳಿಯ ರಾಮಚಂದ್ರ ಹತ್ಯೆಗೆ ಸಂಚು ರೂಪಿಸಿ ಅತ್ತೆಯನ್ನು ಕೊಲೆ ಮಾಡಿದ್ದಾನೆ. ಕೋಳಾಲದಲ್ಲಿರುವ ಸ್ನೇಹಿತ ಸತೀಶ್ನ ಫಾರ್ಮ್ ಹೌಸ್ನಲ್ಲಿ ಕೊಲೆ ಮಾಡಿ ದೇಹದ ಭಾಗಗಳನ್ನು ತುಂಡರಿಸಿ 18 ಕಡೆಗಳಲ್ಲಿ ಎಸೆದಿದ್ದರು. ಬಳಿಕ ಧರ್ಮಸ್ಥಳ ಪ್ರವಾಸಕ್ಕೆ ಹೋಗಿದ್ದರು.
ಲಕ್ಷ್ಮಿದೇವಮ್ಮ ಕಾಣೆಯಾದ ಬಗ್ಗೆ ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿದ್ದರಬೆಟ್ಟದ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ತಲೆ ಹಾಗೂ ಉಡುಪು ಸಿಕ್ಕಿತ್ತು. ಅವರ ಕುಟುಂಬಸ್ಥರನ್ನು ಕರೆದು ವಿಚಾರಿಸಿದ್ದು, ಕೈ ಮೇಲಿನ ಹಚ್ಚೆ, ಮುಖದ ಮೇಲಿನ ಕೆಲವು ಗುರುತು, ಉಡುಪುಗಳ ಆಧಾರದ ಮೇಲೆ ಕೊಲೆಯಾಗಿರುವುದು ಲಕ್ಷ್ಮಿದೇವಮ್ಮ ಎಂಬುವುದು ದೃಢಪಟ್ಟಿತ್ತು.
ಪ್ರಕರಣದ ತನಿಖೆಗೆ ಪೋಲಿಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಅವರ ಮಾರ್ಗದರ್ಶನದಲ್ಲಿ ವೃತ್ತಿ ನಿರೀಕ್ಷಕ ಅನಿಲ್ ಹಾಗೂ ತೀರ್ಥೆಶ್ ಸೇರಿದಂತೆ 8 ತಂಡಗಳನ್ನು ನಿಯೋಜಿಸಲಾಗಿತ್ತು. ಕೊಲೆಯಾದ ಲಕ್ಷ್ಮೀದೇವಮ್ಮನ ಅಳಿಯ ರಾಮಚಂದ್ರ ಇವನ ಸ್ನೇಹಿತ ಸತೀಶ್ ಹಾಗೂ ಕಿರಣ ಸೇರಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಯ ನಂತರ ಧರ್ಮಸ್ಥಳ ಪ್ರವಾಸಕ್ಕೆ ಹೋಗಿದ್ದರು. ಇದು ಅನುಮಾನಕ್ಕೆ ಕಾರಣವಾಗಿತ್ತು.
ಬಳಿಕ ಪೊಲೀಸರು ಕರೆಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಕೊರಟಗೆರೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


