ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇವಾಲಯದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿಯನ್ನ ವಿಶೇಷ ತನಿಖಾ ತಂಡದ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿ ಕರೆತಂದಿದ್ದಾರೆ..
4 ಕೆಜಿ ಚಿನ್ನ ಕಳುವಾದ ಪ್ರಕರಣದಲ್ಲಿ ಕೇರಳ ಎಸ್‌ಐಟಿ ತಂಡವು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮೇಲೆ ದಾಳಿ ನಡೆಸಿದ್ದು, ಚಿನ್ನದಂಗಡಿಯ ಮಾಲೀಕ ಚಿನ್ನ ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಚಿನ್ನ ಮಾರಾಟ ಮಾಡಿದ ಪೋಟಿ ಉನ್ನಿಕೃಷ್ಣನ್ ಮನೆ ಮೇಲೆ ಶುಕ್ರವಾರ ಎಸ್‌ಐಟಿ ದಾಳಿ ನಡೆಸಿದ್ದು, ಆತನ ಮನೆಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಬೆಂಗಳೂರಿನ ಶ್ರೀರಾಂಪುರದಲ್ಲಿ ಚಿನ್ನಲೇಪಿತ ಕವಚಗಳನ್ನು ಇರಿಸಿ ಈತ ದೇಣಿಗೆ ಸಂಗ್ರಹಿಸಿದ್ದ ಎಂಬ ಆರೋಪವೂ ಇದೆ. ಹೀಗಾಗಿ ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿಗೆ ಕರೆತರಲಾಗಿದೆ. ಅಲ್ಲದೇ ಕದ್ದ ಚಿನ್ನವನ್ನ ಬಳ್ಳಾರಿಯಲ್ಲಿ ಮಾರಾಟ ಮಾಡಿರುವ ಆರೋಪದ ಹಿನ್ನೆಲೆ ಬಳ್ಳಾರಿಯಲ್ಲೂ ತಪಾಸಣೆ ನಡೆಸಿದ್ದು, ಒಂದಿಷ್ಟು ಚಿನ್ನವನ್ನ ರಿಕವರಿ ಮಾಡಲಾಗಿದೆ. ಅದಕ್ಕೆ ಪೂರಕವಾದ ದಾಖಲೆಗಳು ಬೆಂಗಳೂರಿನಲ್ಲಿದ್ದ ಕಾರಣ ಇಬ್ಬರು ಅಧಿಕಾರಿಗಳು ಕೋರ್ಟ್ ಅನುಮತಿಯೊಂದಿಗೆ ಬಂದು ದಾಖಲೆ ಕಲೆ ಹಾಕಿದ್ದಾರೆ
ಎಸ್‌ಪಿ ಶಶಿಧರನ್ ನೇತೃತ್ವದ ಕೇರಳದ ಎಸ್‌ಐಟಿ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದು, ನಿನ್ನೆ ರೊದ್ದಂ ಜ್ಯುವೆಲ್ಸ್ ಮಳಿಗೆ ಮೇಲೆ ದಾಳಿ ನಡೆಸಿದೆ. ಈ ವೇಳೆ ನಾಣ್ಯಗಳ ರೂಪದಲ್ಲಿ 476 ಗ್ರಾಂ ಚಿನ್ನ ಪತ್ತೆಯಾಗಿದೆ. ಈ ಚಿನ್ನವನ್ನ ಪೊಟ್ಟಿಯಿಂದ ರೊದ್ದಂ ಗೋಲ್ಡ್ ಮಾಲೀಕ ಗೋವರ್ಧನ್ ಖರೀದಿ ಮಾಡಿದ್ದ. ಚಿನ್ನ ವಶಕ್ಕೆ ಪಡೆದ ಎಸ್‌ಐಟಿ ತಂಡ ಗೋವರ್ಧನ್ ವಿಚಾರಣೆ ನಡೆಸಿದೆ. ಸದ್ಯ ರೊದ್ದಂ ಗೋಲ್ಡ್ ಶಾಪ್ ಬೀಗ ಹಾಕಲಾಗಿದೆ. ಅಲ್ಲದೇ ಬೆಂಗಳೂರಿನ ಉನ್ನಿಕೃಷ್ಣನ್ ಮನೆಯಲ್ಲಿ ಚಿನ್ನದ ಗಟ್ಟಿ ಹಾಗೂ 2 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಚಿನ್ನದ ಮೂರ್ತಿಗಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ದ್ವಾರಪಾಲಕ ವಿಗ್ರಹಕ್ಕೆ ಹೊದಿಸಿದ 42.8 ಕೆಜಿ ತೂಕದ ಕವಚದಲ್ಲಿ 4.5 ಕೆಜಿ ಚಿನ್ನ ನಾಪತ್ತೆಯಾಗಿದೆ. ಹಳೆಯ ತಾಮ್ರ ಮತ್ತು ಚಿನ್ನದ ಲೇಪನ ಮೂರ್ತಿಗಳ ತೂಕದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಆಯುಕ್ತರು ಆರೋಪಿಸಿದ್ದರು. 2019ರಲ್ಲಿ ದೇವರ ಮೂರ್ತಿಗಳಿಗೆ ಪುನರ್‌ಲೇಪನ ಮಾಡಲಾಗಿತ್ತು. ಈ ವೇಳೆ ತಾಮ್ರದ ಮೂರ್ತಿಗೆ ಹೊದಿಸಿದ್ದ ಚಿನ್ನದ ಕವಚದಲ್ಲಿ 4.5 ಕೆಜಿ ಚಿನ್ನ ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿತ್ತು.


