ಡೆಹ್ರಾಡೂನ್: ತಡರಾತ್ರಿ ಭಾರೀ ಮೇಘ ಸ್ಫೋಟದಿಂದಾಗಿ ಮನೆಗಳು, ಕಾರು, ಅಂಗಡಿ ಮುಂಗಟ್ಟು ಕೊಚ್ಚಿಕೊಂಡು ಹೋಗಿದ್ದು, ತಮ್ಸಾನದಿ ಉಕ್ಕಿ ಹರಿಯುತ್ತಿದೆ.
ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಗೆ ಸೇತುವೆಗಳು ಹಾನಿಗೊಂಡಿದ್ದು, ಸಹಸ್ರಧಾರ ಮತ್ತು ಐಟಿ ಪಾರ್ಕ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಮೇಘಸ್ಫೋಟದಿಂದ ಕಾರ್ಲಿಗಾಡ್ ನದಿ ತುಂಬಿ ಹರಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ನಿರಂತರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಮುಖ್ಯ ಸೇತುವೆಯೊಂದು ಕುಸಿದು ಬಿದ್ದಿದ್ದು, ನದಿ ಪ್ರದೇಶದ ಸುತ್ತಮುತ್ತ ಅಪಾರ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿರುವುದಾಗಿ ವರದಿ ತಿಳಿಸಿದೆ. ಮೇಘ ಸ್ಫೋಟದಲ್ಲಿ ಭೂಕುಸಿತ ಸಂಭವಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ನೂರಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


