ಅಪ್ಘಾನಿಸ್ತಾನ:ಅಫ್ಘಾನಿಸ್ತಾನದಲ್ಲಿ ಕಳೆದ ರಾತ್ರಿ ಪ್ರಬಲ ಭೂಕಂಪನ ಸಂಭವಿಸಿದೆ. ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 800ಕ್ಕೂ ಜನರು ಸಾವನ್ನಪ್ಪಿದ್ದಾರೆ. ಮತ್ತು 2500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಭಾನುವಾರ ರಾತ್ರಿ ಸ್ಥಳೀಯ ಸಮಯ ರಾತ್ರಿ 11.47 ಕ್ಕೆ ಪೂರ್ವ ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹೆಚ್ಚಿನ ಸಾವುನೋವುಗಳು ಕುನಾರ್ ಪ್ರಾಂತ್ಯದಿಂದಲೇ ಸಂಭವಿಸಿದೆ.
ನೆರೆಯ ನಂಗಾಹರ್ ಪ್ರಾಂತ್ಯದ ಜಲಾಲಾಬಾದ್ ನಗರದ ಸಮೀಪವಿರುವ ಕುನಾರ್‌ನ ಹಲವಾರು ಪಟ್ಟಣಗಳಲ್ಲಿ ಈ ಭೂಕಂಪವು ಅಪ್ಪಳಿಸಿದೆ. ಕಾಬೂಲ್‌ನಿಂದ ನೆರೆಯ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ವರೆಗೆ ಕಟ್ಟಡಗಳು ನಡುಗಿದ ವರದಿಯಾಗಿದೆ.ಭೂಕಂಪದಿಂದಾಗಿ ಮನೆಯ ಛಾವಣಿ ಕುಸಿದು ಜನ ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ಹಲವಾರು ಮಕ್ಕಳು ಗಾಯಗೊಂಡಿದ್ದಾರೆ. ಪೂರ್ವ ಅಫ್ಘಾನಿಸ್ತಾನದಾದ್ಯಂತ ಕೆಲವು ಸೆಕೆಂಡುಗಳ ಕಾಲ ಕಟ್ಟಡಗಳು ಕಂಪಿಸಿದವು, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸುಮಾರು 370 ಕಿ.ಮೀ ದೂರದಲ್ಲಿ ಕಂಪನದ ಅನುಭವವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಪೀಡಿತ ರಾಷ್ಟ್ರಕ್ಕೆ ಸಂಪೂರ್ಣ ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬದ ಜೊತೆಗೆ ನಾವಿದ್ದೇವೆ. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಭಾರತವು ಪೀಡಿತರಿಗೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸಲು ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.