ಚಿಕ್ಕೋಡಿ: ಹಾಡುಹಗಲೇ ಸಿನಿಮಾ ಶೈಲಿಯಲ್ಲಿ ಗನ್ ತೋರಿಸಿ ದುಷ್ಕರ್ಮಿಗಳು ಚಿನ್ನದ ಅಂಗಡಿ ದರೋಡೆಗೆ ಯತ್ನಿಸಿರುವ ಘಟನೆ ಚಿಕ್ಕೋಡಿಯ ಅಥಣಿಯಲ್ಲಿ ನಡೆದಿದೆ.
ಅಥಣಿ ಪಟ್ಟಣದಲ್ಲಿ ಏಕಾಏಕಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಅಂಗಡಿಯಲ್ಲಿದ್ದ ಚಿನ್ನವನ್ನು ಕದಿಯಲು ಯತ್ನಿಸಿದ್ದು, ಬಳಿಕ ಧೈರ್ಯಶಾಲಿ ಅಂಗಡಿ ಮಾಲೀಕರ ಪ್ರತಿಕ್ರಿಯೆಯಿಂದ ಖದೀಮರು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಅಂಗಡಿಗೆ ನುಗ್ಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಹೇಶ್ ಪೋತದಾರ ಅವರ ಸ್ವತ್ತಿನ ತ್ರಿಮೂರ್ತಿ ಜ್ಯುವೆಲ್ಸ್ ಅಂಗಡಿಗೆ ಇಬ್ಬರು ಖದೀಮರು ತಲೆಗೆ ಹೆಲ್ಮೆಟ್ ಧರಿಸಿ ಪ್ರವೇಶಿಸಿದ್ದಾರೆ. ಅಂಗಡಿಗೆ ನುಗ್ಗಿದ ಕ್ಷಣವೇ ಗನ್ ತೋರಿಸಿ ಚಿನ್ನ ಒಪ್ಪಿಸಲು ಒತ್ತಾಯಿಸಿದ ಆರೋಪಿಗಳು ಕ್ಷಣಾರ್ಧದಲ್ಲಿ ದರೋಡೆ ನಡೆಸಲು ಯತ್ನಿಸಿದ್ದಾರೆ.
ತಕ್ಷಣ ಗಟ್ಟಿಯಾಗಿ ಕಿರುಚಿದ ಅಂಗಡಿ ಮಾಲೀಕ ಧೈರ್ಯದಿಂದ ಎದುರಿಸಿದ್ದಾನೆ. ಸುತ್ತಮುತ್ತಲಿನ ಜನ ಸೇರುವ ಭಯದಿಂದ ದರೋಡೆ ಯತ್ನ ವಿಫಲಗೊಂಡು, ಇಬ್ಬರು ಖದೀಮರು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ.
ಇನ್ನು ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.