ಮಂಡ್ಯ: ಒಳಮೀಸಲಾತಿ ಸಂಬಂಧ ಅಲೆಮಾರಿ ಸೇರಿದಂತೆ ಅತಿ ಹಿಂದುಳಿದ ಸಮುದಾಯಗಳಿಗೆ ಅನ್ಯಾವಾಗಿದೆ. ಕೂಡಲೇ ಮೀಸಲಾತಿ ತಿದ್ದುಪಡಿ ತಂದು ಸರಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಆಗ್ರಹಿಸಿದ್ದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಧಾನಸಭೆಯ ಅಧಿವೇಶನ ಮುಗಿಯುವ ಕೊನೆ ವೇಳೆಯಲ್ಲಿ ಸಿಎಂ ಸಿದ್ದರಾಮಯ್ಯ ಪರಿಶಿಷ್ಠ ಜಾತಿ ಸಮುದಾಯದ ಒಳಮೀಸಲಾತಿಗೆ ತಾರ್ಕಿಕ ಮತ್ತು ತಾತ್ವಿಕ ಅಂತ್ಯ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಆಗಸ್ಟ್ 25 ರಂದು ಆದೇಶ ಹೊರಡಿಸಿದ್ದು, ಆದೇಶದಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಒಳಮೀಸಲಾತಿ ಸಂಬಂಧ ನಾಗಮೋಹನ್‌ದಾಸ್ ಅವರು 5 ವರ್ಗಗಳನ್ನಾಗಿ ವಿಂಗಡಿಸಿದ್ದು, ಎ ವರ್ಗದಲ್ಲಿ ಅತೀ ಹಿಂದುಳಿದ ಪರಿಶಿಷ್ಠ ಸಮುದಾಯದ 5,22,099 ಜನಸಂಖ್ಯೆಯ 59 ಜಾತಿಗಳಿಗೆ ಶೇ.1ರಷ್ಟು, ಬಿ ವರ್ಗದಲ್ಲಿ ಅತೀ ಹೆಚ್ಚು ಹಿಂದುಳಿದ ಪರಿಶಿಷ್ಟ ಸಮುದಾಯದ 36,69,246 ಜನಸಂಖ್ಯೆ 18 ಜಾತಿಗಳಿಗೆ ಶೇ.6 ರಷ್ಟು, ಸಿ ವರ್ಗದಲ್ಲಿ ಹಿಂದುಳಿದ ಪರಿಶಿಷ್ಟ ಸಮುದಾಯದ 30,08,633 ಜನಸಂಖ್ಯೆಯ 17 ಜಾತಿಗಳಿಗೆ ಶೇ. 5ರಷ್ಟು, ಡಿ ವರ್ಗದಲ್ಲಿ ಕಡಿಮೆ ಹಿಂದುಳಿದ ಪರಿಶಿಷ್ಟ ಸಮುದಾಯದ 28,24,939 ಜನಸಂಖ್ಯೆಯ 4 ಜಾತಿಗಳಿಗೆ ಶೇ.4ರಷ್ಟು ಹಾಗೂ ಇ ವರ್ಗದಲ್ಲಿ 4,74,954 ಜನಸಂಖ್ಯೆಯ ಮೂಲ ಜಾತಿಯ ಹೆಸರು ನಮೂದಿಸಿದ್ದು, ಜಾತಿಗಳಿಗೆ ಶೇ.2ರಷ್ಟು ಮೀಸಲಾತಿ ಶಿಫಾರಸ್ಸು ಮಾಡಿದ್ದಾರೆ ಎಂದು ಹೇಳಿದರು.
ಅಲೆಮಾರಿ ಹಾಗೂ ಅರೆ ಅಲೆಮಾರಿ, ಅಸಹಾಯಕ ಮತ್ತು ದುರ್ಬಲ ಸಮುದಾಯಗಳನ್ನು ವಿಂಗಡಿಸಿರುವ ನಾಗಮೋಹನ್‌ದಾಸ್ ವರದಿಯಲ್ಲಿ ಶೇ.1 ರಷ್ಟು ಮೀಸಲಾತಿ ನೀಡಿದ್ದರೂ. ಇತರೆ ಪ್ರಬಲ ವರ್ಗಗಳನ್ನು ಸೇರಿಸಿದ ರಾಜ್ಯ ಸರ್ಕಾರ ಮಹಾಮೋಸ ಎಸಗಿದೆ. ಇದು ತಾತ್ವಿಕ ಮತ್ತು ತಾರ್ಕಿಕ ಎಂಬುದು ಸರಿಯೇ ಎಂದು ಪ್ರಶ್ನಿಸಿದ್ರು.
ನಾಗಮೋಹನ್‌ದಾಸ್ ವರದಿಯ ಶಿಫಾರಸ್ಸಿನ ತಿದ್ದುಪಡಿ ಮಾಡಿಕೊಂಡ ಕಾಂಗ್ರೆಸ್ ಸರ್ಕಾರ ಮೂರು ವರ್ಗಗಳನ್ನಾಗಿ ವಿಂಗಡಿಸಿಕೊಂಡಿದೆ. ಶೇ 6, 6 ಮತ್ತು 5 ರಷ್ಟು ಮೀಸಲಾತಿ ವಿಂಗಡಿಸಿ, 101 ಜಾತಿಗಳ ಪೈಕಿ 98 ಜಾತಿಗಳನ್ನು ಮಾತ್ರ ತೋರಿಸಿದ್ದು, ಕಾನೂನು ಬದ್ಧ ಪರಿಶೀಲನೆಯಲ್ಲಿ ಸಮಸ್ಯೆ ಎದುರಾಗುತ್ತದೆ. ಅನುಚ್ಛೇತ 192ರ ಪ್ರಕಾರ ಜಾತಿಗಳನ್ನು ಸೇರಿಸಲು ಅಥವಾ ತೆಗೆಯಲು ಕೇಂದ್ರ ಸರ್ಕಾರಕ್ಕೆ ಹೊರತು ಪಡಿಸಿ ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ.
ಈ ಸಂಬಂಧ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ, ಸದರಿ ಮೀಸಲಾತಿಗೆ ನ್ಯಾಯಾಲಯ ತಡೆ ನೀಡಲು ಇದೊಂದು ಕಾರಣ ಸಾಕಾಗಿದೆ ಎಂದು ಹೇಳಿದರು.ಸಿಎಂ ಸಿದ್ದರಾಮಯ್ಯ ಈ ಕೂಡಲೇ ತಮ್ಮ ಆದೇಶಕ್ಕೆ ತಿದ್ದುಪಡಿ ತರಬೇಕು. ಇಲ್ಲವಾದಲ್ಲಿ ತಮ್ಮ ಆದೇಶ ಉರ್ಜಿತವಾಗಬಾರದೆಂದು ತಾವೇ ಬೇಕೆಂತಲೇ ಆದೇಶ ಮಾಡಿದಂತಾಗುತ್ತದೆ.
ರಾಜ್ಯ ಸರ್ಕಾರ ತನ್ನ ಹಣಕಾಸಿನ ಮುಗ್ಗಟ್ಟಿನಿಂದ ಮೀಸಲಾತಿ ಜಾರಿಯಾಗದಂತೆ ತಡೆಯಲೆಂದೇ ಒಳಮೀಸಲಾತಿ ಆದೇಶ ಮಾಡಿದಂತೆ ಕಾಣುತ್ತಿದೆ ಎಂದು ಆರೋಪ ಮಾಡಿದರು.