ಬೆಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಕಸರತ್ತು ಶುರುವಾಗಿದೆ. ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಆಗಿರುವ ಹಿನ್ನೆಲೆಯಲ್ಲಿ ಮಂಡ್ಯದ ಕಥೆ ಏನಾಗುತ್ತೆ ಅನ್ನೋ ಕುತೂಹಲವಿದೆ. ಮಂಡ್ಯ ಸೀಟು ಜೆಡಿಎಸ್ ಪಾಲಾದರೆ ಸುಮಲತಾ ಅವರ ಕಥೆ ಏನು? ಅನ್ನೋದಕ್ಕೆ ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ..ಹೌದು ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ನಾನು ಆಕಾಂಕ್ಷಿ ಅಲ್ಲವೆಂದು ಹಲವು ಬಾರಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ಇಂದು ಒಂದು ರೀತಿ ಮಾತನಾಡಿ, ಮತ್ತೊಂದು ದಿನ ಬೇರೆ ಮಾತನಾಡುವ ವ್ಯಕ್ತಿತ್ವ ನನ್ನದಲ್ಲ. ನಾಳೆ ಮಂಡ್ಯ ಜಿಲ್ಲೆಯ ಸಭೆಯನ್ನು ಮಾಡ್ತಿದ್ದೇವೆ. ಯಾರು ಸ್ಪರ್ಧೆ ಮಾಡಬೇಕೆಂದು ಅಲ್ಲಿ ಚರ್ಚೆಯಾಗುತ್ತದೆ ಎಂದರು. ಮಂಡ್ಯದಲ್ಲಿ ಯಾರು ನಿಲ್ಲಬೇಕೆಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ನಾಯಕರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಈ ತಿಂಗಳು ಕುಮಾರಸ್ವಾಮಿ ಹಾಗೂ ನಮ್ಮ ನಾಯಕರು ದೆಹಲಿಗೆ ಹೋಗ್ತಾರೆ. ಅದಕ್ಕೆ ಒಂದು ದಿನಾಂಕ ನಿಗದಿಯಾಗುತ್ತದೆ. ಅತಿ ಶೀಘ್ರದಲ್ಲಿ ನಿಮ್ಮೆಲ್ಲರಿಗೂ ಸಿಹಿ ಸುದ್ದಿಕೊಡುತ್ತೇವೆ ಎಂದು ಹೇಳಿದರು. ಮಂಡ್ಯ ಲೋಕಸಭಾ ಸ್ಥಾನವನ್ನು ಜೆಡಿಎಸ್ ಪಡೆದುಕೊಳ್ಳುವುದು ಮುಖ್ಯ. ಬಳಿಕ ಮುಂದಿನ ದಿನಗಳಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎಂದು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.