ಒಂದು ಕಡೆ ಶ್ರೀರಾಮ ಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಹಿಂದೂಗಳ ಆರಾಧ್ಯ ದೈವ ಶ್ರೀರಾಮ ಜನ್ಮ ಭೂಮಿ ಆಯೋಧ್ಯೆ ಇದೀಗ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜನವರಿ 22ರಂದು ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆಯೂ ಆಗಲಿದೆ. ಈ ಕ್ಷಣವನ್ನ ದೇಶವಷ್ಟೆ ಅಲ್ಲ ಇಡೀ ವಿಶ್ವವೇ ಕಣ್ತುಂಬಿಕೊಳ್ಳೋಕೆ ಕಾತುರದಿಂದ ಕಾಯುತ್ತಿದೆ.

ಅತ್ತ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ರಾಮಭಜನೆಯ ಹಿಂದೆ ಧರ್ಮ ಪಾಲಿಟಿಕ್ಸ್ ಇದೆ ಅಂತ ವಿರೋಧ ಪಕ್ಷಗಳು ಗುಡುಗುತ್ತಿವೆ. ಹಿಂದೂಗಳ ಮತ ಸೆಳೆಯೋಕೆ ಶ್ರೀರಾಮನ ಭಜನೆಯನ್ನ ಬಿಜೆಪಿ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇನ್ನು 2024ರ ಸಾರ್ವತ್ರಿಕ ಚುನಾವಣೆಗೆ ದಿನಗಣನೆಗಳು ಆರಂಭವಾಗುತ್ತಿವೆ. ಮತ್ತೊಂದು ಸುತ್ತಿಗೆ ಅಧಿಕಾರದ ಗದ್ದುಗೆ ಹಿಡಿಯೋಕೆ ಕಾಂಗ್ರೆಸ್ ಮತ್ತು ಬಿಜೆಪಿ ನಾನಾ ಕಸರತ್ತು ನಡೆಸುತ್ತಿದೆ. ಇದರ ಮುಂದುವರಿದ ಭಾಗ ಎಂಬಂತೆ ಇದೀಗ ಬಿಜೆಪಿ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತಗಳನ್ನ ಸೆಳೆಯೋದಿಕ್ಕೆ ಮಾಸ್ಟರ್ ಪ್ಲಾನ್ ಒಂದನ್ನ ರೂಪಿಸಿದೆ.

ಹೌದು..2024ರ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಮುಸ್ಲಿಂ ಮಹಿಳೆಯರನ್ನು ಪಕ್ಷದತ್ತ ಸೆಳೆಯಲು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಜ.2ರಿಂದ ಉತ್ತರ ಪ್ರದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ‘ಶುಕ್ರಿಯಾ ಮೋದಿ ಭಾಯಿಜಾನ್’ ಅಭಿಯಾನವನ್ನು ಪ್ರಾರಂಭಿಸಲಿದೆ.
‘ನಾ ದೂರಿ ಹೈ, ನಾ ಖೈ ಹೈ, ಮೋದಿ ಹಮಾರಾ ಭಾಯಿ ಹೈ’ ಎಂಬ ಘೋಷ ಮೊಳಗುತ್ತಿದೆ. ಯಾವುದೇ ಬೇರ್ಪಡುವಿಕೆ ಇಲ್ಲ, ಯಾವುದೇ ಕಂದಕವಿಲ್ಲ, ಮೋದಿ ನಮ್ಮ ಸಹೋದರ ಎಂಬ ಅಡಿಬರಹದೊಂದಿಗೆ, ಅಭಿಯಾನವು ಪ್ರತಿ ಕ್ಷೇತ್ರದಲ್ಲಿ ಕನಿಷ್ಠ ಸಾವಿರ ಮುಸ್ಲಿಂ ಮಹಿಳೆಯರನ್ನು ಪಕ್ಷದತ್ತ ಸೆಳೆಯುವ ಗುರಿಯನ್ನು ಊ ಅಭಿಯಾನ ಹೊಂದಿದೆ.

ಉತ್ತರ ಪ್ರದೇಶ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಕುನ್ವರ್ ಬಸಿತ್ ಅಲಿ ಈ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ಜ.2 ರಿಂದ ಅಭಿಯಾನ ಆರಂಭವಾಗಲಿದ್ದು, ಜ.20 ರವರೆಗೆ ನಡೆಯಲಿದೆ. ಅಭಿಯಾನದ ಅಡಿ ನರೇಂದ್ರ ಮೋದಿ ಸರ್ಕಾರವು ಮುಸ್ಲಿಂ ಮಹಿಳೆಯರ ಉದ್ಧಾರಕ್ಕೆ ಮಾಡಿದ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಮತ್ತು ಬಿಜೆಪಿಗೆ ಮತ ಹಾಕಲು ಪ್ರೋತ್ಸಾಹಿಸುವ ಅಜೆಂಡಾ ಇಟ್ಟುಕೊಳ್ಳಲಾಗಿದೆ.
ಮೋದಿ ಅವರು ಮುಸ್ಲಿಂ ಮಹಿಳೆಯರಿಗೆ ವಿವಿಧ ಯೋಜನೆಗಳಲ್ಲಿ ಆದ್ಯತೆ ನೀಡುವ ಮೂಲಕ ಸಹೋದರ-ಸಹೋದರಿ ಸಂಬಂಧವನ್ನು ಸ್ಥಾಪಿಸಿದ್ದಾರೆ. ಹೀಗಾಗಿ ಅಭಿಯಾನಕ್ಕೆ ‘ಶುಕ್ರಿಯಾ ಮೋದಿ ಭಾಯಿಜಾನ್’ ಎಂದು ಹೆಸರಿಡಲಾಗಿದೆ ಎಂದು ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಕುನ್ವರ್ ತಿಳಿಸಿದ್ದಾರೆ
ಅಭಿಯಾನದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗವುದು. ಕಾರ್ಯಕ್ರಮಗಳಲ್ಲಿ ಮುಸ್ಲಿಂ ಮಹಿಳೆಯರು ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಇತರ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸಲಾಗುವುದು ಎಂದು ಅಲಿ ತಿಳಿಸಿದ್ದಾರೆ.

ಮುಸ್ಲಿಂ ಮತಗಳನ್ನ ಸೆಳೆಯೋದಿಕ್ಕೆ ಇದೊಂದು ಹೊಸತಂತ್ರವನ್ನ ಬಿಜೆಪಿ ಹೆಣೆದಿರೋದು ಸತ್ಯ. – ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಿಜೆಪಿ ಅಲ್ಪಸಂಖ್ಯಾತ ಘಟಕ ಸಿದ್ಧತೆ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಮಹಿಳೆಯರ ಸಹೋದರ ಎಂದು ಬಿಂಬಿಸಲು ಆಂದೋಲನ ನಡೆಸಲಾಗುತ್ತಿದೆ. ಮುಸ್ಲಿಂ ಮಹಿಳೆಯರಿಗಾಗಿ ಮೋದಿ ಜಾರಿಗೆ ತಂದ ಯೋಜನೆಗಳ ಬಗ್ಗೆ ಎಲ್ಲ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಮತಬೇಟೆಯಾಡೋದು ಪ್ರಮುಖ ಉದ್ದೇಶವಾಗಿದೆ.
ಇನ್ನು ಕರ್ನಾಟಕದಲ್ಲಿ ಜನವರಿ 03 ರಂದು ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ವಿವಿಧ ಮೋರ್ಚಾದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಅಲ್ಪಸಂಖ್ಯಾತ ಮೋರ್ಚಾ ನಾಯಕರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಮೋದಿ ಮೀರಾ ಮಾಂಜಿ ಎಂಬ ಹೆಣ್ಣು ಮಗಳ ಮನೆಗೆ ಹೋಗಿ ಚಹಾ ಸೇವಿಸಿದ್ದು, ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಮೀರಾ ಮಾಂಜಿ ಸೇರ್ಪಡೆಯೊಂದಿಗೆ 10 ಕೋಟಿ ಫಲಾನುಭವಿಗಳ ಸಂಖ್ಯೆ ತಲುಪಿತ್ತು. ಇದುವೇ ವಿಶೇಷ. ಹೀಗಾಗಿಯೇ ಅವರ ಮನೆಗೆ ಪ್ರಧಾನಿ ಮೋದಿ ಭೇಟಿ ನೀಡಿ ಚಹಾ ಕುಡಿದಿರುವಂಥದ್ದು. ಈ ಒಂದು ವಿಚಾರ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿರೋದಲ್ಲದೇ ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಗಾನಿಸ್ತಾನದಂತಹ ದೇಶಗಳಲ್ಲಿ ಮೋದಿ ಜಪ ಆರಂಭವಾಗಿದೆ.
ಒಟ್ನಲ್ಲಿ ಮೋದಿ ವಿಶ್ವ ನಾಯಕ ಅಂತ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇದೆಲ್ಲವೂ ಪೊಲಿಟಿಕಲ್ ಗಿಮಿಕ್ ಅಂತ ವಿರೋಧ ಪಕ್ಷಗಳು ವ್ಯಂಗ್ಯವಾಡುತ್ತಿವೆ. ಹಿಂದೂತ್ವ, ಬೆಲೆ ಏರಿಕೆ, ಹಿಜಾಬ್, ಹಲಾಲ್ ವಿವಾದಗಳ ನಡುವೆಯೂ ಅಲ್ಪಸಂಖ್ಯಾತ ಮತಗಳನ್ನ ಓಲೈಸಿ ಲೋಕಸಭೆ ಗೆಲ್ಲೋದಿಕ್ಕೆ ಮೋದಿ ಶುಕ್ರಿಯಾ ಅಂದಿರೋದಂತೂ ಸುಳ್ಳಲ್ಲ.