ಬೆಂಗಳೂರು:ಚನ್ನಪಟ್ಟಣದಲ್ಲಿ ಪಕ್ಷದಿಂದ ಕಣಕ್ಕಿಳಿಸಿರುವ ಅಭ್ಯರ್ಥಿ ಬಗ್ಗೆ ಕಾರ್ಯಕರ್ತರು ಹಾಗೂ ಮುಖಂಡರಿಗೆ ಅಸಮಾಧಾನವಿದೆ ಎಂಬುದೆಲ್ಲ ಸುಳ್ಳು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸಿ.ಪಿ. ಯೋಗೇಶ್ವರ್ ಅವರನ್ನು ಚನ್ನಪಟ್ಟಣ ಅಭ್ಯರ್ಥಿಯನ್ನಾಗಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನಗೊಂಡಿಲ್ಲ.ಕಾರ್ಯಕರ್ತರು ಮತ್ತು ಮುಖಂಡರು ಯೋಗೇಶ್ವರ್ ಅವರನ್ನು ಸ್ವಾಗತಿಸಿದ್ದಾರೆ. ಕೆಲವರು ಡಿ.ಕೆ. ಸುರೇಶ್ ಸ್ಪರ್ಧಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು ಅಷ್ಟೇ. ಅದನ್ನು ಹೊರತುಪಡಿಸಿದರೆ ಈಗಿನ ಅಭ್ಯರ್ಥಿ ಕುರಿತಂತೆ ಯಾರಲ್ಲೂ ಅಪಸ್ವರವಿಲ್ಲ. ಪಕ್ಷದ ಹಿತದಿಂದ ನಾವೆಲ್ಲ ಸೇರಿ ತೀರ್ಮಾನ ಮಾಡಿದ್ದೇವೆ ಎಂದರು.
ಯೋಗೇಶ್ವರ್‌ಗೆ ಸಿ.ಟಿ.ರವಿ ಸಹಕಾರವಿದೆ: ಸಿ.ಪಿ.ಯೋಗೇಶ್ವರ್ ಅವರನ್ನು ಸೇರಿಸಿಕೊಂಡು ಕಾಂಗ್ರೆಸ್ ದುರ್ಬಲ ಎಂಬುದನ್ನು ತೋರಿಸಿದೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರ ಮತ್ತು ಬಿಜೆಪಿ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ. ಆದರೆ, ಸಿ.ಟಿ.ರವಿ ಅವರ ಸಹಕಾರ ಯೋಗೇಶ್ವರ್ ಪರವಾಗಿದೆ. ಉಳಿದ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ ಎಂದು ಚುಟುಕಾಗಿ ಹೇಳಿದರು.


