ಬೆಂಗಳೂರು : ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾಪುರ ಪೊಲೀಸರು ನ್ಯಾಯಾಲಯಕ್ಕೆ 1,328 ಪುಟಗಳ ಸುದೀರ್ಘ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ದರೋಡೆಕೋರರ ಸ್ಫೋಟಕ ಯೋಜನೆಗಳು ಬಯಲಾಗಿವೆ. 2025ರ ನವೆಂಬರ್ 19ರಂದು ನಡೆದ ಈ ದರೋಡೆಯ ಹಣವನ್ನು ಆರೋಪಿಗಳು ಗೋವಾಕ್ಕೆ ತೆರಳಿ ಅಲ್ಲಿನ ಕ್ಯಾಸಿನೋಗಳಲ್ಲಿ ಖರ್ಚು ಮಾಡಲು ಮತ್ತು ತಮ್ಮ ಸಾಲಗಳನ್ನು ತೀರಿಸಲು ನಿರ್ಧರಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಕೇವಲ 54 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದ ಪೊಲೀಸರು, ಇದೀಗ ಒಂಬತ್ತು ಆರೋಪಿಗಳ ವಿರುದ್ಧ ದರೋಡೆ, ಸಂಚು ಮತ್ತು ಜೀವ ಬೆದರಿಕೆ ಸೇರಿದಂತೆ ವಿವಿಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

ಈ ದರೋಡೆಯ ಮಾಸ್ಟರ್ ಮೈಂಡ್ ಸಿಎಂಎಸ್ ಇನ್ಫೋ ಸಿಸ್ಟಮ್ಸ್‌ನ ಮಾಜಿ ಉದ್ಯೋಗಿ ಜೇವಿಯರ್ ಆಗಿದ್ದು, ಆತ ಕಂಪನಿಯ ಹಣ ಸಾಗಾಣಿಕೆಯ ಎಲ್ಲಾ ರಹಸ್ಯಗಳನ್ನು ತಿಳಿದಿದ್ದನು. ದರೋಡೆ ಮಾಡಿದ ನಂತರ ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಹೋಗಿ, ಅಲ್ಲಿಂದ ಉತ್ತರ ಪ್ರದೇಶದ ಮೂಲಕ ಅಥವಾ ನೇರವಾಗಿ ಗೋವಾಕ್ಕೆ ಪರಾರಿಯಾಗಲು ಗ್ಯಾಂಗ್ ಸ್ಪಷ್ಟವಾದ ಮಾರ್ಗವನ್ನು ರೂಪಿಸಿಕೊಂಡಿತ್ತು. ಇನ್ನು ಈ ಪ್ರಕರಣದಲ್ಲಿ ಗೋವಿಂದಪುರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಕೂಡ ಪ್ರಮುಖ ಪಾತ್ರ ವಹಿಸಿರುವುದು ಅಚ್ಚರಿ ಮೂಡಿಸಿದೆ. ಆರ್‌ಬಿಐ ಅಧಿಕಾರಿಗಳಂತೆ ನಟಿಸಿ ದಕ್ಷಿಣ ಬೆಂಗಳೂರಿನಲ್ಲಿ ವ್ಯಾನ್ ಅಡ್ಡಗಟ್ಟಿದ್ದ ಇವರು, ಇಡೀ ಕಾರ್ಯಾಚರಣೆಯನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಿದ್ದರು.
ಜಯನಗರ ಎಸಿಪಿ ನೇತೃತ್ವದ ತಂಡವು ವೈಜ್ಞಾನಿಕ ವಿಧಾನದಲ್ಲಿ ತನಿಖೆ ನಡೆಸಿ 129 ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಕಣ್ಣಾರೆ ಕಂಡ ಸಾಕ್ಷಿಗಳ ಹೇಳಿಕೆಗಳು, ಫೊರೆನ್ಸಿಕ್ ದಾಖಲೆಗಳು ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಚಾರ್ಜ್‌ಶೀಟ್ ಸಿದ್ಧಪಡಿಸಲಾಗಿದೆ. ದರೋಡೆ ಹಣದಲ್ಲಿ ಮೋಜು ಮಸ್ತಿ ಮಾಡುವ ಹಗಲುಗನಸು ಕಂಡಿದ್ದ ಈ ತಂಡವು ಈಗ ಕಾನೂನಿನ ಸುಳಿಗೆ ಸಿಲುಕಿದೆ. ಜೇವಿಯರ್ ಜೊತೆಗೆ ರವಿ ಮತ್ತು ಗೋಪಿ ಎಂಬುವವರು ಕೂಡ ಲಾಜಿಸ್ಟಿಕ್ ಮತ್ತು ಕಾರ್ಯಾಚರಣೆಯ ಜವಾಬ್ದಾರಿ ಹೊತ್ತು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.


