ಜಿಲ್ಲೆರಾಜ್ಯಸುದ್ದಿ

ಬಳ್ಳಾರಿಯಲ್ಲಿ ಸಿಕ್ಕಿತು 5,000 ವರ್ಷ ಹಳೆಯ ಅಸ್ಥಿಪಂಜರ..!

ಬಳ್ಳಾರಿ: ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನವು ಐತಿಹಾಸಿಕ ಮಹತ್ವದ ಮೈಲಿಗಲ್ಲೊಂದನ್ನು ತಲುಪಿದೆ. ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋಧಕರ ತಂಡವು ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದ ಎರಡು ಮಾನವ ಅಸ್ಥಿಪಂಜರಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಸುಮಾರು 5.5 ಅಡಿ ಉದ್ದದ ಈ ಅಸ್ಥಿಪಂಜರಗಳು ಅಂದಾಜು 3,000 ದಿಂದ 5,000 ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಅಸ್ಥಿಪಂಜರಗಳು ಅಚ್ಚರಿಯ ರೀತಿಯಲ್ಲಿ ಸುಸ್ಥಿತಿಯಲ್ಲಿದ್ದು, ಪ್ರಾಚೀನ ಕಾಲದ ಶವಸಂಸ್ಕಾರದ ಪದ್ಧತಿಯ ಮೇಲೆ ಬೆಳಕು ಚೆಲ್ಲುತ್ತಿವೆ. ಮೃತದೇಹಗಳ ಮೇಲೆ ಕಲ್ಲುಗಳನ್ನು ಜೋಡಿಸಿ ಹೂಳುವ ವಿಶಿಷ್ಟ ವಿಧಾನದ ಕುರುಹುಗಳು ಇಲ್ಲಿ ಕಂಡುಬಂದಿವೆ. ಪತ್ತೆಯಾದ ಸ್ಥಳದಲ್ಲಿ ಅಸ್ಥಿಪಂಜರಗಳ ಜೊತೆಗೆ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ಮತ್ತು ಮಾನವರು ಬಳಸುತ್ತಿದ್ದ ಆಯುಧಗಳ ಸಾಕ್ಷ್ಯಗಳು ದೊರೆತಿರುವುದು ಈ ಪ್ರದೇಶವು ನವಶಿಲಾಯುಗದ ಪ್ರಮುಖ ಮಾನವ ನೆಲೆಯಾಗಿತ್ತು ಎಂಬುದನ್ನು ಪುಷ್ಠೀಕರಿಸುತ್ತದೆ.

ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಆರ್. ಶೇಜೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಪಳೆಯುಳಿಕೆಗಳ ನಿಖರವಾದ ಕಾಲಮಾನ ಮತ್ತು ಹಿನ್ನೆಲೆಯನ್ನು ತಿಳಿಯಲು ‘ಕಾರ್ಬನ್ ಡೇಟಿಂಗ್’ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದಾರೆ. ಐತಿಹಾಸಿಕವಾಗಿ ಶ್ರೀಮಂತವಾಗಿರುವ ತೆಕ್ಕಲಕೋಟೆ ಬೆಟ್ಟದ ಪ್ರದೇಶವನ್ನು ಸಂರಕ್ಷಿತ ತಾಣವೆಂದು ಘೋಷಿಸಿ ಮುಂದಿನ ಪೀಳಿಗೆಗಾಗಿ ಉಳಿಸಬೇಕಾದ ಅಗತ್ಯವಿದೆ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.

Comments (0)

Your email address will not be published. Required fields are marked *

Back to top button